ಬಂಟ್ವಾಳ: ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದು ಇಕೋ ಸಿಸ್ಟಮ್ ನಿರ್ಮಿಸಿ ಕಾರ್ಯರೂಪಕ್ಕೆ ತರಲು ಮಾ.16 ರಂದು ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಒಂದು ದಿನದ ಪ್ರಾಂತೀಯ ಹಿಂದು ರಾಷ್ಟ್ರ ಅಧಿವೇಶನ ನಡೆಯಲಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ, ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ಅಧಿವೇಶನ ನಡೆಯಲಿದೆ. ಇದರಲ್ಲಿ ದ.ಕ. ಕೊಡಗು, ಉಡುಪಿ, ಉತ್ತರ ಕನ್ನಡ ಜಿಲ್ಲೆಯಿಂದ ನೂರಕ್ಕೂ ಅಧಿಕ ಹಿಂದು ಸಂಘಟನೆಗಳ
2,500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಈ ಅಧಿವೇಶನದಲ್ಲಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ, ಹಿರಿಯ ವಕೀಲ ಅರುಣ್‌ಶ್ಯಾಮ್, ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ, ಸನಾತನ ಸಂಸ್ಥೆಯ ಧರ್ಮಪ್ರಸಾರಕ ಸಂತ ರಮಾನಂದ ಗೌಡ ಸೇರಿದಂತೆ ವಕೀಲರು, ವೈದ್ಯರು, ಉದ್ಯಮಿಗಳು,
ಚಿಂತಕರು, ಲೇಖಕರು, ದೇವಸ್ಥಾನಗಳ ವಿಶ್ವಸ್ಥರು, ಸಕ್ರಿಯ ಹಿಂದು ಕಾರ್ಯಕರ್ತರು, ವಿವಿಧ ಆಧ್ಯಾತ್ಮಿಕ, ಧಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸುವರು ಎಂದರು. ರಾಜ್ಯದ ಸಾವಿರಾರು ರೈತರ, ದೇವಸ್ಥಾನಗಳ ಜಮೀನನ್ನು ಕಬಳಿಸಲು ವಕ್ಫ್ ಬೋರ್ಡ್ ತನ್ನ
ಅಧಿಕಾರ ದುರ್ಬಳಕೆ ಮಾಡಿ ಯತ್ನಿಸುತ್ತಿದೆ. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ 4,500 ಕೋಟಿ ರು. ನೀಡಿದೆ. ಅಲ್ಪಸಂಖ್ಯಾತರನ್ನು ಓಲೈಸುವ ಮೂಲಕ ಬಹುಸಂಖ್ಯಾತ ಹಿಂದುಗಳನ್ನು ಕಡೆಗಣಿಸಲಾಗುತ್ತಿದೆ. ಭವಿಷ್ಯದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾದರೆ ಅಚ್ಚರಿ ಪಡಬೇಕಾಗಿಲ್ಲ. ದೇಶದ 10 ರಾಜ್ಯಗಳಲ್ಲಿ ಈಗಾಗಲೇ ಹಿಂದುಗಳು ಅಲ್ಪಸಂಖ್ಯಾತರಾಗಿದ್ದಾರೆ. ಹಿಂದೂಗಳ ಮೇಲಿನ ದೌರ್ಜನ್ಯ, ಲವ್ ಜಿಹಾದ್, ಹಲಾಲ್ ಜಿಹಾದ್ ಮಿತಿ ಮೀರಿ ನಡೆಯುತ್ತಿದೆ. ಪಠ್ಯಗಳಲ್ಲಿ ಇತಿಹಾಸ ತಿರುಚುವ ಜೊತೆಗೆ ಈಶಾನ್ಯ ರಾಜ್ಯಗಳನ್ನು ಕ್ರೈಸ್ತ ರಾಜ್ಯವಾಗಿ ಸ್ಥಾಪಿಸುವ ಕುತಂತ್ರ ನಡೆಯುತ್ತಿದೆ.
ಭಾರತದ ಅಖಂಡತೆ ಕಾಪಾಡಲು ಮತ್ತು ವೈಚಾರಿಕವಾಗಿ ಹಿಂದು ಮೇಲಿನ ದಬ್ಬಾಳಿಕೆ ತಡೆಯಲು ಹಿಂದು ಇಕೋ ಸಿಸ್ಟಮ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು. ಮುಖಂಡರಾದ ಎಂ.ಜೆ.ಶೆಟ್ಟಿ, ಕಿರಣ್ ರೈ, ಈಶ್ವರ ಕೊಟ್ಟಾರಿ, ಚಂದ್ರ ಮೊಗೇರ ಇದ್ದರು.