ಹುಬ್ಬಳ್ಳಿ: ಬೆಂಗಳೂರಿನಲ್ಲಿ ನಿಧನ ಹೊಂದಿದ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಡೇವಿಡ್ ಸಿಮಿಯೋನ್ ಅವರ ಅಗಲಿಕೆಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಹಾಗೂ ಹಿರಿಯ ರಾಜಕೀಯ ಮುತ್ಸದ್ದಿ ಡೇವಿಡ್ ಸಿಮಿಯೋನ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ತಮ್ಮ ಶೋಕ ಸಂದೇಶದಲ್ಲಿ, ವಿಧಾನ ಪರಿಷತ್ತಿನ ಸದಸ್ಯರಾಗಿ ಕ್ರೀಯಾಶೀಲವಾಗಿ ಕಾರ್ಯ ನಿರ್ವಹಿಸಿರುವ ಡೇವಿಡ್ ಸಿಮಿಯೋನ್ ಮೂರು ವರ್ಷಕಾಲ ವಿಧಾನ ಪರಿಷತ್ತಿನ ಉಪಸಭಾಪತಿಯಾಗಿ ಹಾಗೂ ಸುಮಾರು ಒಂದೂವರೆ ವರ್ಷಗಳ ಕಾಲ ಹಂಗಾಮಿ ಸಭಾಪತಿಯಾಗಿ ಸದನವನ್ನು ಸಮರ್ಥವಾಗಿ ನಿರ್ವಹಿಸಿದ್ದನ್ನು ಹೊರಟ್ಟಿಯವರು ಸ್ಮರಿಸಿದ್ದಾರೆ.
ಕಲಬುರಗಿ ಮೂಲದ ಡೇವಿಡ್ ಸಿಮಿಯೋನ್ ಅವರಿಗೆ 75 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಸಂಖ್ಯೆಯ ಬಂಧು-ಮಿತ್ರರರು ಹಾಗೂ ಒಡನಾಡಿಗಳನ್ನು ಅಗಲಿದ್ದಾರೆ. ಹಿರಿಯ ರಾಜಕಾರಣಿ ಡೇವಿಡ್ ಸಿಮಿಯೋನ್ 1996ರಿಂದ 2002ರವರೆಗೆ ಮೂರು ವರ್ಷಗಳ ಕಾಲ ಪರಿಷತ್ತಿನ ಉಪಸಭಾಪತಿಯಾಗಿ ಹಾಗೂ ಸುಮಾರು ಒಂದೂವರೆ ವರ್ಷಗಳ ಕಾಲ ಹಂಗಾಮಿ ಸಭಾಪತಿಯಾಗಿ ಸದನವನ್ನು ಸಮರ್ಥವಾಗಿ ನಿರ್ವಹಿಸಿದ್ದರು.