ತೀರ್ಥಹಳ್ಳಿ: ತಾಲೂಕಿನ ಮಹಿಷಿ ಉತ್ತರಾಧಿ ಮಠದಲ್ಲಿ ದರೋಡೆ ನಡೆಸಿದ ಆರೋಪಿಯನ್ನು ಪೊಲೀಸರು ಹಿಡಿಯಲು ಹೋದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಲ್ಲದೆ, ಪೊಲೀಸರ ಮೇಲೆಯೇ ದಾಳಿ ನಡೆಸಲು ಮುಂದಾದಾಗ, ಪೊಲೀಸರು ಆರೋಪಿ ಕಾಲಿಗೆ ಗುಂಡ ಹೊಡೆದು ವಶಕ್ಕೆ ಪಡೆದಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಏ. 5ರಂದು ಮಹಿಷಿ ಉತ್ತರಾಧಿ ಮಠದಲ್ಲಿ 12-15 ಜನ ಮುಸುಕುಧಾರಿಗಳು 50 ಸಾವಿರ ರೂ ನಗದು, ಲ್ಯಾಪ್‌ಟಾಪ್, ಮೊಬೈಲ್‌ಗಳನ್ನು ಕಿತ್ತುಕೊಂಡು ಹೋದ ಪ್ರಕರಣ ನಡೆದಿತ್ತು. ಈ ಪ್ರಕರಣ ಮಾಳೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಏ. 6ರಂದು ಎಸ್ಪಿ ಮಿಥುನ್‌ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಿ ಕೆಂಗುಡ್ಡೆಯ ಕೆರೆಯ ಬಳಿ ಬಂಧಿಸಲು ತೆರಳಿದ್ದ ಮಾಳೂರು ಪಿಎಸ್‌ಐ ಕುಮಾರ್ ಕೆ. ಮತ್ತು ಇತರೆ ಸಿಬ್ಬಂದಿ ಮೇಲೆ ದಾಳಿಗೆ ಮುಂದಾಗಿದ್ದ ಆರೋಪಿಯ ಎಡಗಾಲಿಗೆ ಗುಂಡೇಟು ಬಿದ್ದಿದೆ.
ಶಿಕಾರಿಪುರದ ಪ್ರಗತಿ ನಗರದ ನಿವಾಸಿ ಕೆ. ಶ್ರೀನಿವಾಸ ಯಾನೆ ಸೀನಾ (25) ಬಂಧಿತ ಆರೋಪಿ. ಮಾಳೂರು ಪಿಎಸ್‌ಐ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಸಹ ಎಚ್ಚರಿಕೆಗೆ ಬಗ್ಗದ ಸೀನಾ ದಾಳಿ ಮುಂದುವರೆಸಿದ್ದ. ಅನಿವಾರ್ಯವಾಗಿ ಪಿಎಸ್‌ಐ ಅವರು ಸೀನನ ಎಡಗಾಲಿಗೆ ಗುಂಡು ಹಾರಿಸಿದ್ದಾರೆ. ಆತನಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಎಸ್ಪಿ ಮಿಥುನ್‌ಕುಮಾರ್ ತಿಳಿಸಿದ್ದಾರೆ.