ಮಹಿಳೆ ಉಳಿಸಲು ಹೋಗಿ ಪಲ್ಟಿಯಾದ ಕಾರಿನಲ್ಲಿರುವುದನ್ನು ಕಂಡು ಹೌಹಾರಿದ ಸ್ಥಳೀಯರು…

ಮಹಿಳೆಯನ್ನು ರಕ್ಷಣೆ ಮಾಡಲು ಹೋಗಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್’ಗೆ ಡಿಕ್ಕಿಯಾಗಿ ನಾಲ್ಕೈದು ಪಲ್ಟಿಯಾಗಿದೆ.

ಬಸವಕಲ್ಯಾಣ: ರಸ್ತೆ ಮೇಲೆ ಅಡ್ಡ ಬಂದ ಮಹಿಳೆಗೆ ಉಳಿಸಲು ಹೋಗಿ ಪಲ್ಟಿಯಾದ ಕಾರಿನಲ್ಲಿ ಕೋಟ್ಯಾಂತರ ರೂ. ಮೌಲ್ಯದ ಗಾಂಜಾ ಪತ್ತೆಯಾದ ಘಟನೆ ತಾಲೂಕಿನ ರಾಜೇಶ್ವರ ಗ್ರಾಮದ ಬಳಿ ಜರುಗಿದೆ.
ನೆರೆಯ ತೆಲಂಗಾಣ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 65-ರ ಮಾರ್ಗವಾಗಿ ಮಹಾರಾಷ್ಟ್ರದ ಕಡೆಗೆ ಸಾಗುತ್ತಿದ್ದ ಕಾರು ಪಟ್ಟಿಯಾಗಿದ್ದು, ಪಲ್ಟಿಯಾಗಿರುವ ಕಾರಿನಲ್ಲಿ 118 ಕೆಜಿ ಗಾಂಜಾ ಪತ್ತೆಯಾಗಿದೆ. ರಾಜೇಶ್ವರ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ-65ರ ಮೇಲಿನ ಸೇತುವೆ ಮೇಲೆ ಮಹಿಳೆಯೊಬ್ಬರು ರಸ್ತೆ ದಾಟುತಿದ್ದಳು, ಇದೇ ವೇಳೆ ತೆಲಂಗಾಣ ಕಡೆಯಿಂದ ವೇಗವಾಗಿ ಬಂದ ಕಾರು ಮಹಿಳೆಯನ್ನು ರಕ್ಷಣೆ ಮಾಡಲು ಹೋಗಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್’ಗೆ ಡಿಕ್ಕಿಯಾಗಿ ನಾಲ್ಕೈದು ಪಲ್ಟಿಯಾಗಿದೆ. ಕಾರು ಪಲ್ಟಿಯಾಗುತಿದ್ದಂತೆ ಕಾರಿನ ಡಿಕ್ಕಿಯಲ್ಲಿ ಇದ್ದ ಗಾಂಜಾದ ಪುಡಿಗಳು ರಸ್ತೆ ಮೇಲೆ ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಕಾರಿನಲ್ಲಿ ಗಾಂಜಾ ಇರುವುದನ್ನು ಕಂಡು ಹೌಹಾರಿದ ಸ್ಥಳೀಯರು ಕಾರಿನಲ್ಲಿ ಇದ್ದ ಇಬ್ಬರು ಆರೋಪಿಗಳನ್ನು ಹಿಡಿದು ತಕ್ಷಣ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ಬಸವಕಲ್ಯಾಣ ಗ್ರಾಮೀಣ ಠಾಣೆ ಪೊಲೀಸರ ತಂಡ ಕಾರು ಹಾಗೂ ಅದರಲ್ಲಿ ಇದ್ದ 118 ಕೆಜಿ ಯಷ್ಟು ಗಾಂಜಾ ಜಪ್ತಿ ಮಾಡಿದ್ದು, ಗಾಂಜಾ ಸಾಗಿಸುತಿದ್ದ ಮಹಾರಾಷ್ಟ್ರದ ಪಂಡರಾಪುರ ಮೂಲದ ಫೀರೋಜ್ ಹಾಗೂ ರೀಯಾಜ್ ಎನ್ನುವ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರೆಸಿದ್ದಾರೆ.

ಘಟನೆಯಲ್ಲಿ ಆರೋಪಿಗಳಿಬ್ಬರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಸಧ್ಯ ಪೊಲೀಸ್ ವಶದಲ್ಲಿದ್ದಾರೆ. ಇಲ್ಲಿ ಸಿಕ್ಕಿರುವ ಗಾಂಜಾದ ಒಟ್ಟು ಮೌಲ್ಯ 1.18 ಲಕ್ಷ ರೂ. ಗಳಷ್ಟು ಆಗಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸುದ್ದಿ ತಿಳಿದ ಹುಮನಾಬಾದನ ಡಿವೈಎಸ್ಪಿ ಜೆ.ಎಸ್.‌ನ್ಯಾಮಗೌಡ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದಾರೆ.