ಈ ಮುಂಚೆ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಥಳಿಸಿದ್ದ ಘಟನೆ ಮಾಸುವ ಮುನ್ನವೇ ಇಂತಹ ಮತ್ತೊಂದು ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ: ಸಾರ್ವಜನಿಕವಾಗಿ ಮಹಿಳೆಯ ಬಟ್ಟೆ ಹರಿದು ಹಾಕಿ ಹಲ್ಲೆ ಮಾಡಿದ ಘಟನೆ ನಗರದ ವಡ್ಡರವಾಡಿಯಲ್ಲಿ ನಡೆದಿದೆ.
ಬೆಳಗಾವಿಯ ವಡ್ಡರವಾಡಿಯಲ್ಲಿ ವೇಶ್ಯಾವಾಟಿಕೆ ಆರೋಪದಲ್ಲಿ ಮಹಿಳೆ ಹಾಗೂ ಆಕೆಯ ಮಗಳ ಮೇಲೆ ಹಲ್ಲೆ ನಡೆಸಿ, ಸಾರ್ವಜನಿಕವಾಗಿ ಆಕೆಯ ಬಟ್ಟೆ ಹರಿದು ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ವಡ್ಡರವಾಡಿ ಮನೆಯಲ್ಲಿ ತಾಯಿ-ಮಗಳು ಸೇರಿ ನಾಲ್ವರು ಮನೆಯೊಂದರಲ್ಲಿ ವಾಸವಾಗಿದ್ದಾರೆ. ಪಕ್ಕದ ಮನೆಯ ಕುಟುಂಬದವರು ಮಹಿಳೆಯ ವಿರುದ್ಧ ವೇಶ್ಯಾವಾಟಿಕೆ ಆರೋಪ ಮಾಡುತ್ತಿದ್ದಾರೆ. ಮನೆಗೆ ಪದೇ ಪದೇ ಯಾರೋ ಸಂಬಂಧವಿಲ್ಲದವರು ಬರುತ್ತಾರೆ. ಮನೆ ಖಾಲಿ ಮಾಡುವಂತೆ ಹೇಳುತ್ತಿದ್ದರು. ಇದೀಗ ನೆರೆಮನೆಯವರು ಏಕಾಏಕಿ ಮನೆಗೆ ನುಗ್ಗಿ ತಾಯಿ ಮಗಳನ್ನು ಹೊರಗೆಳೆದು ತಂದು ಹಲ್ಲೆ ನಡೆಸಿ ಸಾರ್ವಜನಿಕವಾಗಿ ಬಟ್ಟೆ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತಾಯಿ ಮತ್ತು ಮಗಳು ಮಾಳಮಾರುತಿ ಠಾಣೆಗೆ ದೂರು ನೀಡಿದ್ದಾರೆ. ಆದರೆ ಠಾಣೆಯಲ್ಲಿ ದೂರು ಸ್ವೀಕರಿಸದ ಕಾರಣ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಸಂಬಂಧ ಇಲ್ಲದವರು ಮನೆಗೆ ಬಂದು ಹೋಗುತ್ತಿದ್ದಾರೆ. ವೇಶ್ಯಾವಾಟಿಕೆ ಮಾಡುತ್ತಿದ್ದೀರಿ ಎಂದು ಆರೋಪಿಸಿ ನಮ್ಮ ಮೇಲೆ ಅಮಾನವೀಯವಾಗಿ ವರ್ತಿಸಿ ಹಲ್ಲೆ ಮಾಡಿದ್ದಾರೆ. ನಾವು ಇರುವ ಮನೆಯನ್ನು ತೊರೆಯುವಂತೆ ಮಾಡಲು ಸುಖಾಸುಮ್ಮನೆ ಜಗಳ ತೆಗೆದು ಹಲ್ಲೆ ಮಾಡುತ್ತಿದ್ದಾರೆ. ಹೀಗಾಗಿ ನಮಗೆ ಜೀವ ಭಯ ಇದೆ ರಕ್ಷಣೆ ನೀಡಿ ಎಂದು ತಾಯಿ ಮತ್ತು ಮಗಳು ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ನಗರ ಪೊಲೀಸ್ ಆಯುಕ್ತರ ಸೂಚನೆಯ ಮೇರೆಗೆ ಬಿಎನ್‌ಎಸ್ ಕಾಯ್ದೆಯಡಿ ಮೂವರ ವಿರುದ್ದ ಕೇಸ್ ದಾಖಲಾಗಿದೆ.
























