ಭೌತಿಕವಾಗಿ ಎಲ್ಲ ಮನುಷ್ಯರು ವಿಭಿನ್ನವಾಗಿ ಕಾಣಿಸಿಕೊಂಡರೂ ಆಧ್ಯಾತ್ಮಿಕವಾಗಿ ಅವರೆಲ್ಲ ಒಂದೇ. ಆಧ್ಯಾತ್ಮಿಕವಾಗಿ ಒಂದಾಗುವುದೆಂದರೆ ಜನಸಂದಣಿಯ ಒಂದು ಸಮಾಜದಲ್ಲಿದ್ದು ಪರಸ್ಪರ ಕಚ್ಚಾಟ, ದೋಷಾರೋಪಣೆಗಳ ವಾತಾವರಣದಿಂದ ಹೊರಬಂದು ವಿಶಾಲ, ಸಾರ್ವತ್ರಿಕ ಪರಿಸರದಲ್ಲಿ ಬಂದಾಗ ವಿಶಾಲ ಪ್ರಪಂಚದ ನಾಗರಿಕರಾಗುತ್ತೇವೆ. ವಿಶಾಲ ದೃಷ್ಟಿ, ಬಂಧು ಭಾವ, ಸುತ್ತಲೂ ಒಂದುಗೂಡುವಿಕೆಯ ಭಾವದಿಂದಾಗಿ ಎಲ್ಲೆಲ್ಲೂ ಐಕ್ಯತೆ ಕಾಣುತ್ತೇವೆ.
ಈ ವಿಶಾಲ ಐಕ್ಯತಾ ಭಾವ ಈಗಾಗಲೇ ನಮ್ಮಲ್ಲಿದ್ದರೂ ನಾವು ಅರಿತಿರುವುದಿಲ್ಲ. ನಾವು ಹಾಕಿಕೊಂಡಿರುವ ಕವಚದಿಂದಾಗಿ ನಮ್ಮೆಲ್ಲರಲ್ಲಿ ಒಂದೇ ಭಾವ ಮೂಡಿ ಆಧ್ಯಾತ್ಮಿಕ ಐಕ್ಯತೆ ಮೂಡುತ್ತದೆ. ಎಲ್ಲ ಧರ್ಮಗಳು ಇದನ್ನೇ ಪ್ರತಿಪಾದಿಸಿವೆ. ಕುರಾನಿನ ಅನ್ನಿಸಾ (೪:೧) ಅಧ್ಯಾಯದ ಒಂದು ವಚನದಲ್ಲಿ ಮಾನವರೇ ನಿಮ್ಮನ್ನೆಲ್ಲ ಒಂದೇ ಜೀವದಿಂದ ಸೃಷ್ಟಿಸಿದ. ನಿಮ್ಮ ಒಡೆಯನನ್ನು ಸ್ಮರಿಸಿರಿ. ಅದೇ ಜೀವದಿಂದ ಅದರ ಜೊತೆಯನ್ನು ಸೃಷ್ಟಿಸಿದನು. ಅವರಿಬ್ಬರ ಮೂಲಕ ಅನೇಕ ಸ್ತ್ರೀ ಪುರುಷರನ್ನು ಸೃಷ್ಟಿಸಿದನು. ಕುರಾನಿನ ಯೂನುಸ್(೧೦:೧೯)ರ ವಚನದಲ್ಲಿ, ಆರಂಭದಲ್ಲಿ ಮಾನವರೆಲ್ಲರೂ ಒಂದೇ ಸಮುದಾಯದವರಾಗಿದ್ದರು. ನಂತರ ಅವರು ವಿವಿಧ ತತ್ವಾದರ್ಶಗಳನ್ನು ಉಂಟು ಮಾಡಿಕೊಂಡರು. ಎಲ್ಲ ಧರ್ಮಗಳು ಮೂಲಭೂತವಾಗಿ ಮನುಷ್ಯನೊಳಗೆ ಮತ್ತು ಮನುಷ್ಯ ಮನುಷ್ಯನ ನಡುವಿನ ಈ ಅಧ್ಯಾತ್ಮಿಕತೆಯನ್ನೇ ಪ್ರೋತ್ಸಾಹಿಸುವುದಾಗಿದೆ. ಇದನ್ನು ಸಾಧಿಸಲು ಧರ್ಮಗಳಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಇಸ್ಲಾಮಿ ವಿದ್ವಾಂಸರು ಈ ಅಧ್ಯಾತ್ಮಿಕ ಐಕ್ಯತೆಯನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಿದ್ದಾರೆ. ದೇವರೊಡನೆ, ನಿಸರ್ಗದೊಡನೆ ಹಾಗೂ ಮಾನವ ಕುಲದೊಡನೆ, ನಮ್ಮಲ್ಲಿರುವ ಐಕ್ಯತಾಭಾವ ನಾವೆಲ್ಲ ಒಂದಲ್ಲ ಒಂದು ಬಾರಿ ಈ ಐಕ್ಯತೆಯ ಅನುಭವವನ್ನು ಹೊಂದಿರುವೆವು. ಆದರೆ ನಮ್ಮ ಸ್ವಾಭಾವಿಕ ಬೇಕು ಬೇಡಗಳ ಮೇಲೆ ಹಲವಾರು ಹೊದಿಕೆಗಳಿವೆ. ವಸ್ತುವಿನ ದುರಾಸೆ, ಸ್ವಯಂ ಕೇಂದ್ರೀಕರಣ, ದ್ವೇಷಾಸೂಯೆ, ಪ್ರತ್ಯೇಕತಾ ಭಾವ ಈ ಮುಂತಾದ ಹೊದಿಕೆಗಳನ್ನು ತೆರೆದಾಗಲೆ ನಮ್ಮಲ್ಲಿ ಆಧ್ಯಾತ್ಮಿಕ ಏಕತಾಭಾವ ಜಾಗೃತವಾಗುವುದು. ಪ್ರವಾದಿವರ್ಯ ಮುಹಮ್ಮದ (ಸ) ಅವರ ಒಂದು ವಚನವನ್ನು ಉದಾಹರಿಸಬಹುದು. (ಅನಸ)
ಎಲ್ಲ ಸೃಷ್ಟಿಗಳು ಸೇರಿ ದೇವನ ಕುಟುಂಬವಾಗುತ್ತದೆ. ಆ ಕುಟುಂಬವನ್ನು ಅತ್ಯುತ್ತಮ ರೀತಿಯಲ್ಲಿ ನೋಡಿಕೊಳ್ಳುವವನು ದೇವರ ಪ್ರೀತಿಗೆ ಪಾತ್ರನಾಗುತ್ತಾನೆ’.
ಎರಡೂವರೆ ಶತಮಾನಗಳ ಹಿಂದೆ ಆಧ್ಯಾತ್ಮಿಕತೆಯ ಐಕ್ಯತಾಭಾವವನ್ನು ಬಿಡಿಸಿ ಸರಳವಾಗಿಸಿದವರು ಸ್ವಾಮಿ ವಿವೇಕಾನಂದರು.
೧೮೮೩ ರಲ್ಲಿ ಚಿಕ್ಯಾಗೋದಲ್ಲಿ ನಡೆದ ಧರ್ಮ ಸಮ್ಮೇಳನದಲ್ಲಿ ಎಲ್ಲ ಉಪನ್ಯಾಸಕರು, ಸಭಿಕರನ್ನು ಕುರಿತು ಮಹಿಳೆಯರೆ, ಸಜ್ಜನರೆ ಎಂದು ಸಂಬೋಧಿಸಿದರೆ ಸ್ವಾಮಿ ವಿವೇಕಾನಂದರು ಸಭಿಕರನ್ನು `ಸೋದರಿ ಸೋದರರೆ’ ಎಂದು ಕರೆದಾಗ ಸಭಾ ಗೃಹದಲ್ಲಿದ್ದ ಇಡೀ ಸಭಿಕರು ಎದ್ದು ನಿಂತು ಬಹಳ ಹೊತ್ತಿನವರೆಗೆ ಚಪ್ಪಾಳೆ ಬಾರಿಸಿ ಸಂತಸಗೊಂಡರು.
ವಿವೇಕಾನಂದರು ಎಲ್ಲರಲ್ಲಿಯೂ ಇದ್ದ ಭೇದ ಭಾವಗಳನ್ನು ತೊಡೆದು ಹಾಕಿ ಎಲ್ಲರಲ್ಲಿಯೂ ಅಡಗಿದ್ದ ಆಧ್ಯಾತ್ಮಿಕತೆಯನ್ನು ಒಟ್ಟುಗೂಡಿಸಿದರು. ತಾಂತ್ರಿಕ ಪ್ರಗತಿಯಿಂದಾಗಿ ಜಗತ್ತು ಭೌತಿಕವಾಗಿ ಬಹಳ ಸಮೀಪ ಬಂದಿದ್ದರೂ, ಆಂತರಿಕವಾಗಿ ಇನ್ನೂ ಐಕ್ಯತೆಯನ್ನು ಸಾಧಿಸಿಲ್ಲ. ಇಂದಿನ ಸಮಾಜದಲ್ಲಿ ಇರುವ ದ್ವೇಷಾಸೂಯೆ, ಅಶಾಂತಿಯನ್ನು ತೊಡೆದು ಹಾಕಲು ನಮಗಿರುವ ಒಂದೇ ಒಂದು ಮಾರ್ಗವೆಂದರೆ ಆಧ್ಯಾತ್ಮಿಕತೆಯ ಐಕ್ಯತೆ.