ತುಮಕೂರು: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ನಡೆದ ಗಲಾಟೆ ಪ್ರಕರಣವನ್ನು ಬಿಜೆಪಿಯುವರು ರಾಜಕೀಯ ಅಸ್ತ್ರ ಮಾಡಿಕೊಂಡು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರು ಉದಯಗಿರಿ ಗಲಾಟೆಗೆ ಯಾರು ಕಾರಣಕರ್ತರಾಗಿದ್ದರು ಅವರನ್ನೆಲ್ಲ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ತನಿಖೆ ಮುಂದುವರಿದಿದೆ. ಈ ಸಂದರ್ಭದಲ್ಲಿ ಬಿಜೆಪಿಯವರು ಘಟನೆಯನ್ನು ರಾಜಕೀಯ ಅಸ್ತ್ರವಾಗಿ ಉಪಯೋಗ ಮಾಡಿಕೊಂಡಿದ್ದಾರೆ.
ಮೈಸೂರಿನಲ್ಲಿ ಪ್ರತಿಭಟನೆ ಮಾಡಲು ಅನುಮತಿ ಕೋರಿ ಪೊಲೀಸರಿಗೆ ಮನವಿ ಮಾಡಿದ್ದರು. ಪ್ರತಿಭಟನೆ ನಡೆಸುವುದಕ್ಕೆ ಅನುಮತಿ ನೀಡಲು ಪೊಲೀಸರು ನಿರಾಕರಿಸಿದ್ದು ಈ ವಿಚಾರವಾಗಿ ಅನುಮತಿ ಕೋರಿ ಹೈಕೋರ್ಟ್‌ಗೆ ಹೋಗಿದ್ದಾರೆ. ಕೋರ್ಟ್‌ನಲ್ಲಿ ಏನು ತೀರ್ಮಾನ ಬರುತ್ತದೆಯೇ ನೋಡಬೇಕು ಎಂದು ಹೇಳಿದರು.
ಮೈಸೂರು ಗಲಾಟೆ ವಿಚಾರದಲ್ಲಿ ಹೆಚ್ಚು ರಾಜಕೀಯ ಮಾಡುವ ಬದಲು, ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ನಮಗೆ ಅವಕಾಶ ಮಾಡಿದರೆ ಒಳ್ಳೆಯದು. ಅದನ್ನು ಬಿಟ್ಟು ರಾಜಕೀಯ ಮಾಡಿದರೆ ಸರಿ ಹೋಗುವುದಿಲ್ಲ ಎಂದು ಎಚ್ಚರಿಸಿದರು.
ಮಂಗಳೂರು ಜೈಲಿನಲ್ಲಿ ಮಾದಕ ವಸ್ತು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ. ಡ್ರಗ್ಸ್ ಪೂರೈಕೆ ಮಾಡಿದವರು ಯಾರು? ಹೇಗೆ ಪೂರೈಕೆಯಾಗಿದೆ ಎಂಬುದನ್ನು ತನಿಖೆ ನಡೆಸಲಿದ್ದಾರೆ. ಅಕ್ರಮ ಚಟುವಟಿಕೆಗಳು ಕಂಡುಬಂದಾಗಲೆಲ್ಲ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ. ಮಂಗಳೂರು ಹೊಸ ಜೈಲು ಕಟ್ಟಡ ನಿರ್ಮಾಣ ನಡೆಯುತ್ತಿದೆ. ಪೂರ್ಣಗೊಂಡ ಬಳಿಕ ಸ್ಥಳಾಂತರಿಸಲಾಗುವುದು ಎಂದು ಹೇಳಿದರು.
ಪ್ರತಿ ಸಲ ಗಡಿಭಾಗದಲ್ಲಿ ಭಾಷಾ ಆಧಾರದ ಮೇಲೆ ಆಗುವ ಗಲಾಟೆ ವೇಳೆ ಬಹಳ ಎಚ್ಚರಿಕೆಯಿಂದ ಮಹಾರಾಷ್ಟ್ರದವರು ನಡೆದುಕೊಳ್ಳಬೇಕು. ಅದನ್ನು ಹೆಚ್ಚು ಬೆಳೆಯಲು ಬಿಡಬಾರದು. ನಮ್ಮಲ್ಲಿ ಅಂತಹ ಪ್ರಕರಣಗಳು ಆದಾಗ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮಹಾರಾಷ್ಟ್ರದವರು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಎಚ್ಚರಿಸಿದರು.
ಕಾಂಗ್ರೆಸ್ ನಾಯಕರು ದೆಹಲಿ ಪ್ರವಾಸ ಕೈಗೊಳ್ಳುತ್ತಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅನೇಕ ಬಾರಿ ಕೆಲಸ ಕಾರ್ಯಗಳ ನಿಮಿತ್ತ ದೆಹಲಿಗೆ ಹೋಗುತ್ತಾರೆ. ನಾನು ಒಂದು ವರ್ಷದ ನಂತರ ದೇಹಲಿಗೆ ಹೋಗಿದ್ದೆ. ನಾನು ಖಾಸಗಿ ಕೆಲಸದ ನಿಮಿತ್ತ ದೆಹಲಿಗೆ ಹೋಗಿರುವುದಾಗಿ ತಿಳಿಸಿದ್ದೆ. ದೆಹಲಿಗೆ ಹೋದಾಗ ಪಕ್ಷದ ಕಚೇರಿಗೆ ಭೇಟಿ ನೀಡುವುದು ಸಹಜವಾದ ಪ್ರಕ್ರಿಯೆ. ಇದನ್ನು ಬೇರೆ ರೀತಿಯಾಗಿ ಅರ್ಥೈಸಿಕೊಳ್ಳುವುದರಿಂದ ಪ್ರಯೋಜನವಿಲ್ಲ ಎಂದು ಹೇಳಿದರು.
ಸಚಿವ ಸ್ಥಾನಕ್ಕೆ ರಾಜೀನಾಮೆ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು ಕೊರಟಗೆರೆಯಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡುವಾಗ ಅವರ ಅನಿಸಿಕೆ ಆಧಾರದ ಮೇಲೆ ಮಾತನಾಡಿದ್ದೇನೆ. ಅದಕ್ಕೆ ಅಷ್ಟೊಂದು ಮಹತ್ವ ಕೊಡುವ ಅಗತ್ಯತೆ ಇಲ್ಲ. ಇದರಿಂದ ಯಾವ ಸಂಚಲನ ಮಾಡಬೇಕಾದ ಅಗತ್ಯವಿಲ್ಲ. ನನ್ನ ರಾಜಕೀಯದ ವಿಚಾರ ಕೊರಟಗೆರೆ ಜನತೆಗೆ ಬಿಟ್ಟಿರುವುದು. ಕೊರಟಗೆರೆ ಜನ ನನ್ನನ್ನು ಆರಿಸಿದ್ದಾರೆ. ಅವರ ಏನು ಆಪೇಕ್ಷೆ ಪಡುತ್ತಾರೆ, ಅದನ್ನು ಮಾತಾಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.
ಸಿಎಂ ಆಗಲಿ ಎಂದು ಆಪೇಕ್ಷೆಪಡುತ್ತಾರೆಯೇ ಎಂದ ಮಾಧ್ಯಮದವರ ಪ್ರಶ್ನೆಗೆ, ನಾನು ಅದ್ಯಾವುದರ ಬಗ್ಗೆಯೂ ನಾನು ಮಾತನಾಡುವುದಿಲ್ಲ. ಮುಖ್ಯಮಂತ್ರಿಗಳ ವಿಚಾರ, ಕೆಪಿಸಿಸಿ ಅಧ್ಯಕ್ಷರ ವಿಚಾರದಲ್ಲಿ ಯಾವುದನ್ನು ಬಹಿರಂಗವಾಗಿ ಮಾತನಾಡುವುದಿಲ್ಲ. ನಮ್ಮ ಅನಿಸಿಕೆಗಳನ್ನು ಹೈಕಮಾಂಡ್ ಮುಂದೆ ಹೇಳುವಂತಹದು ನಮ್ಮ ಪಕ್ಷದಲ್ಲಿನ ಪ್ರಕ್ರಿಯೆ. ಇದನ್ನು ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಗಳು ಮಾಡುತ್ತಾರೆ. ನಾನು ಸೇರಿದಂತೆ ಎಲ್ಲರು ಮಾಡುತ್ತೇವೆ ಎಂದು ಹೇಳಿದರು.