ಮಹತ್ವದ ಯೋಜನೆಯ ಕುರಿತು ತಾತ್ಸಾರ ಧೋರಣೆ

ಬೆಂಗಳೂರು: “ಹೆಣ್ಣುಮಕ್ಕಳ ಭವಿಷ್ಯಕ್ಕೆ ಭರವಸೆಯಾಗಿದ್ದ ಬಿ.ಎಸ್.ಯಡಿಯೂರಪ್ಪನವರ ಕನಸಿನ ಯೋಜನೆಯ ಗುರಿ ಸಾಕಾರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಬಡತನದ ಮನೆಯೊಳಗೆ ಹೆಣ್ಣು ಹುಟ್ಟಿತೆಂದು, ಮೂಗು ಮುರಿಯುತ್ತಿದ್ದ’ ಕಾಲದಲ್ಲಿ ಬಡ ಕುಟುಂಬಗಳ ಹೆಣ್ಣೆತ್ತವರ ನೋವು ಅರಿತಿದ್ದ ಯಡಿಯೂರಪ್ಪ ಅವರು ‘ಭಾಗ್ಯಲಕ್ಷ್ಮಿ ಯೋಜನೆ’ ಜಾರಿಗೊಳಿಸಿ ಸ್ತ್ರೀಕುಲಕ್ಕೆ ಅಭಯದ ಸಂದೇಶ ರವಾನಿಸಿದ್ದರು, ಈ ಮಹತ್ವದ ದೂರದೃಷ್ಟಿ ಯೋಜನೆಯ ಫಲ ಲಕ್ಷಾಂತರ ಫಲಾನುಭವಿಗಳ ‘ಭಾಗ್ಯಲಕ್ಷ್ಮಿ ಬಾಂಡ್’ಗಳು ನಗದೀಕರಣಗೊಂಡಿದ್ದು ಶೇ 90% ರಷ್ಟು ಹೆಣ್ಣು ಮಕ್ಕಳು ಹಣವನ್ನು ಪದವಿ ಸೇರಿದಂತೆ ಇತರ ಸ್ನಾತಕೋತ್ತರ ಪದವಿ ಶಿಕ್ಷಣಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದು, ಶೇ 10% ಹೆಣ್ಣುಮಕ್ಕಳು ಮದುವೆ ಕಾರ್ಯಕ್ಕೆ ಬಳಸಿಕೊಳ್ಳುತ್ತಿರುವ ವರದಿ ಸಾರ್ಥಕ ಭಾವ ಮೂಡಿಸಿದೆ.

ಯೋಜನೆ ಆರಂಭದಿಂದ ರಾಜ್ಯದಲ್ಲಿ 34.50 ಲಕ್ಷ ಹೆಣ್ಣುಮಕ್ಕಳು ಭಾಗ್ಯಲಕ್ಷ್ಮಿ ಬಾಂಡ್ ಪಡೆದಿರುವುದು ಕರ್ನಾಟಕ ಬಿಜೆಪಿ ಸರ್ಕಾರದ ನಾರಿಕುಲದ ರಕ್ಷಣೆ ಹಾಗೂ ಕಾಳಜಿಪೂರ್ವಕ ಯಶಸ್ವೀ ಯೋಜನೆಗೆ ಇದೊಂದು ನೈಜ ನಿದರ್ಶನ. ನಾಡಿನ ಲಕ್ಷಾಂತರ ಹೆಣ್ಣು ಹೆತ್ತ ಕುಟುಂಬಗಳು ಸಂತಸ ಪಡುತ್ತಿರುವ ಸಂದರ್ಭದಲ್ಲಿ ವೋಟ್ ಬ್ಯಾಂಕ್ ರಾಜಕಾರಣವೊಂದನ್ನೇ ಗುರಿಯಾಗಿಸಿಕೊಂಡು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಈ ಮಹತ್ವದ ಯೋಜನೆಯ ಕುರಿತು ತಾತ್ಸಾರ ಧೋರಣೆ ತಾಳಿರುವುದು ದೌರ್ಭಾಗ್ಯವೇ ಸರಿ ಎಂದಿದ್ದಾರೆ.