ಹುಬ್ಬಳ್ಳಿ: ಸಿ.ಟಿ ರವಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿಯವರು ಯಾವರ ರೀತಿ ಮಹಜರು ನಡೆಸುತ್ತಾರೆ? ಮಹಜರು ವಿಧಾನ ಏನು ಎಂಬುದರ ಬಗ್ಗೆ ವಿವರ ಒದಗಿಸಿದರೆ ಪರಿಶೀಲಿಸಿ ಸಹಕರಿಸಲಾಗುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಿಗೆ ಸೋಮವಾರ ಮಾತನಾಡಿದ ಅವರು, ಸಿಐಡಿ ಪೊಲೀಸರು ತನಿಖೆಗೆ ಸಂಬಂಧಪಟ್ಟಂತೆ ಮಹಜರು ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಪತ್ರ ಬರೆದಿರುವ ಕುರಿತಂತೆ ಹೊರಟ್ಟಿ ಪ್ರತಿಕ್ರಿಯಿಸಿದ್ದಾರೆ.
ನಮ್ಮ ನಿಯಮ ಏನು ಹೇಳುತ್ತದೆಯೊ ಅದರ ಪ್ರಕಾರ ಮಾಡುತ್ತೇವೆ. ಮಹಜರು ಹೇಗೆ ಮಾಡುತ್ತಾರೆ? ಕುರ್ಚಿ, ಟೇಬಲ್ ನೋಡಿ ಮಹಜರು ಮಾಡುತ್ತಾರೊ? ಅವರನ್ನು ಕರೆಸಿ ಮಹಜರು ಮಾಡುತ್ತಾರೊ? ಟಿವಿ ದೃಶ್ಯಗಳನ್ನು ನೋಡಿ ಮಾಡುತ್ತಾರೊ? ಯಾವುದನ್ನು ನೋಡಿ ಮಾಡುತ್ತಾರೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು. ಮಹಜರು ವಿಧಾನ ತಿಳಿಸಿದರೆ ನಮ್ಮ ಅಧಿಕಾರಿಗಳೊಂದಿಗೆ ಮಾತನಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.