ಉಳ್ಳಾಲ: ನಿಯಂತ್ರಣ ತಪ್ಪಿದ ಸ್ಕೂಟರ್ ರಸ್ತೆ ಅಂಚಿನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾಡೂರು ಶಾರದಾ ನಗರ ಎಂಬಲ್ಲಿ ನಡೆದಿದೆ.
ಮಾಡೂರು ಶಿವಾಜಿನಗರದ ನಿವಾಸಿ ನಾಗೇಶ್.ವಿ(50) ಮೃತ ಪಟ್ಟ ವ್ಯಕ್ತಿ. ನಾಗೇಶ್ ಅವರು ಕುಟುಂಬ ಸಮೇತರಾಗಿ ಕಳೆದ ಮೂರು ವರ್ಷಗಳಿಂದ ಮಾಡೂರಿನಲ್ಲಿ ನೆಲೆಸಿದ್ದರು. ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಕಾಲೇಜಿನ ಬಸ್ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನಾಗೇಶ್ ಬುಧವಾರ ಕೆಲಸಕ್ಕೆ ರಜೆಯಿದ್ದ ಕಾರಣ ಬೀರಿ ಪೇಟೆಯಿಂದ ಸ್ಕೂಟರ್‌ನಲ್ಲಿ ತೆಂಗಿನಕಾಯಿಗಳನ್ನು ಖರೀದಿಸಿ ಮನೆಗೆ ಹೋಗುತ್ತಿದ್ದ ಸಂದರ್ಭ ಸ್ಕೂಟರ್ ನಿಯಂತ್ರಣ ತಪ್ಪಿ ಮರಕ್ಕೆ ಹೊಡೆದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.