ಕೊಪ್ಪಳ: ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮ ದಲ್ಲಿ ೨೦೧೪ರಲ್ಲಿ ನಡೆದ ಸವರ್ಣೀಯರು ಮತ್ತು ದಲಿತರ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ೧೦೧ ಜನರ ಪೈಕಿ ೯೮ ಜನರಿಗೆ ಜೀವಾವಧಿ ಶಿಕ್ಷೆ, ಐದು ಸಾವಿರ ರೂ. ದಂಡ ಮತ್ತು ಮೂವರಿಗೆ ಐದು ವರ್ಷ ಜೈಲು ಶಿಕ್ಷೆ, ೨ ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ ಸಿ. ಆದೇಶ ನೀಡಿದ್ದಾರೆ.
ಜಿಲ್ಲೆಯ ಗಂಗಾವತಿ ನಗರದ ಶವೆ ಚಿತ್ರಮಂದಿರದಲ್ಲಿ ೨೦೧೪ರಂದು ಅಕ್ಟೋಬರ್ ೨೮ರಂದು ಪವರ್ ಸಿನಿಮಾ ಚಲನಚಿತ್ರ ನೋಡಲು ತೆರಳಿದಾಗ ಟಿಕೆಟ್ ಪಡೆಯುವ ವೇಳೆ ಮರಕುಂಬಿ ಗ್ರಾಮದ ಸವರ್ಣೀಯರಿಗೆ ಹಲವರು ಹಲ್ಲೆ ಮಾಡಿದ್ದರು. ಆಗ ದಲಿತರ ಕೇರಿಯ ದುರ್ಗಾದೇವಿ ದೇವಸ್ಥಾನದ ಬಳಿ ಬಂದ ಸವರ್ಣೀಯರು, ದಲಿತರ ಗುಡಿಸಲಿಗೆ ಬೆಂಕಿ ಹಚ್ಚಿದ್ದರು. ಆ ಸಮಯದಲ್ಲಿ ಗುಡಿಸಲಲ್ಲಿ ಯಾರೂ ಇರಲಿಲ್ಲ. ಇಟ್ಟಿಗೆ, ಕಲ್ಲು ಒಗೆದು ಮತ್ತು ಬಡಿಗೆಯಿಂದ ಮನಬಂದಂತೆ ಹೊಡೆಯಲಾಯಿತು ಎಂದು ದೂರಲಾಗಿತ್ತು.