ಬೆಳಗಾವಿ: ವಿರೋಧ ಪಕ್ಷದವರ ಟೀಕೆಗೆ ತಿರುಗೇಟು ನೀಡಲು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಬಾಡಿಗೆ ಮನೆ ಮಾಡಿದ್ದ ಸಂಸದ ಜಗದೀಶ್ ಶೆಟ್ಟರ್ ಇದೀಗ ಮನೆ ಖಾಲಿ ಮಾಡಿದ್ದಾರೆ.
ಲೋಕಸಭಾ ಚುನಾವಣೆ ವೇಳೆ ಬೆಳಗಾವಿ ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿ ಶೆಟ್ಟರ್ ಬಾಡಿಗೆ ಮನೆ ಮಾಡಿದ್ದರು. ಈ ವೇಳೆ ಪತ್ನಿ, ಪುತ್ರ ಸೇರಿ ಕುಟುಂಬ ಸಮೇತ ಬೆಳಗಾವಿಗೆ ಜಗದೀಶ್ ಶೆಟ್ಟರ್ ಶಿಫ್ಟ್ ಆಗಿದ್ದರು. ಯುಗಾದಿ ನಂತರದಲ್ಲಿ ಪೂಜೆಯೊಂದಿಗೆ ಮನೆ ಪ್ರವೇಶಿಸಿದ್ದರು. ಇದೀಗ ದಿಢೀರ್ ಮನೆ ಖಾಲಿ ಮಾಡಿದ್ದು, ಶೆಟ್ಟರ್ ವಾಸವಿದ್ದ ಮನೆಯನ್ನು ಮಾಲಿಕ ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಜಗದೀಶ್ ಶೆಟ್ಟರ್, ಒಂದು ಖಾಯಂ ಮನೆ ನಿರ್ಮಾಣ ಮಾಡುವ ಉದ್ದೇಶದಿಂದ ಸೈಟ್ ನೋಡುತ್ತಿದ್ದೇನೆ. ಆದಷ್ಟು ಬೇಗನೆ ಸೈಟ್ ಖರೀದಿಸಿ, ಮನೆ ಕಟ್ಟುವ ಕೆಲಸ ಆರಂಭಿಸುತ್ತೇನೆ. ಜನರಿಗೆ ಲಭ್ಯವಾಗುವ ನಿಟ್ಟಿನಲ್ಲಿ ವಾರದಲ್ಲಿ ಮೂರ್ನಾಲ್ಕು ದಿನ ಬೆಳಗಾವಿಯಲ್ಲೇ ಇರುವ ಜೊತೆಗೆ ಪ್ರತಿ ತಾಲೂಕಿಗೂ ಭೇಟಿ ನೀಡುವ ಕೆಲಸ ಮಾಡುತ್ತೇನೆ ಎಂದರು.