ಮನಸೂರ ಹೆಸರಿನ ಪ್ರಶಸ್ತಿಯಿಂದ ನನ್ನ ಜೀವನ ಪಾವನ

ಧಾರವಾಡ: ಡಾ. ಮಲ್ಲಿಕಾರ್ಜುನ ಮನಸೂರ ಅವರು ವಿಶ್ವ ಕಂಡ ಶ್ರೇಷ್ಠ ಸಂಗೀತ ವಿದ್ವಾಂಸರು. ಅವರ ಹೆಸರಿನ ಪ್ರಶಸ್ತಿಯು ನನಗೆ ಲಭಿಸಿರುವುದು ನನ್ನ ಜೀವನ ಪಾವನವಾದಂತಾಗಿದೆ ಎಂದು ಪಂಡಿತ ಡಿ. ಕುಮಾರ ದಾಸ್ ಅವರು ನುಡಿದರು.
ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಪಂ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪದ್ಮವಿಭೂಷಣ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಭಾವಸ್ಪರ್ಷಿ ನುಡಿಗಳನ್ನಾಡಿದರು.
ಮನಸೂರ ಗುರುಗಳ ಹೆಸರಿನ ಪ್ರಶಸ್ತಿ ನನ್ನಂಥವರಿಗೆ ದೊರಕಿರುವುದು ಬಡವನಿಗೆ ಸಿರಿವಂತಿಕೆ ಬಂದಂತಾಗಿದೆ. ಇದು ನನ್ನ ಪುಣ್ಯ ಎಂದೇ ಭಾವಿಸುತ್ತೇನೆ. ನಮ್ಮ ಗುರುಗಳ ಆಶೀರ್ವಾದ ಲಭಿಸಿದಂತಾಗಿದೆ ಎಂದು ನುಡಿದರು.
ನಾನು ಹಳ್ಳಿಯಿಂದ ಬಂದವನು. ಗುರುಗಳ ಆಶೀರ್ವಾದ, ಜನರ ಪ್ರೀತಿ, ಸಂಗೀತ ಶಾರದೆಯ ಕೃಪೆಯಿಂದ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಯಿತು. ನನಗೆ ಸಂಗೀತ ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದು ನುಡಿದರು.
ಡಾ. ಮಲ್ಲಿಕಾರ್ಜುನ ಮನಸೂರ ಯುವ ಪ್ರಶಸ್ತಿ ಪುರಸ್ಕೃತ ವಿನಾಯಕ ಹೆಗಡೆ ಮುರ್ತುಮುರ್ಡು ಮಾತನಾಡಿ, ನನ್ನ ಜೀವನದಲ್ಲಿ ಇದು ಧನ್ಯತೆಯ ದಿನ. ಇದು ಮಲ್ಲಿಕಾರ್ಜುನ ಮನಸೂರ ಅವರ ಆಶೀರ್ವಾದ ಎಂದೇ ತಿಳಿದಿದ್ದೇನೆ. ನನಗೆ ಸಂಗೀತ ಕಲಿಸುವ ಗುರುಗಳು, ಪಾಲಕರ ಪ್ರಶಸ್ತಿಯನ್ನು ಸಮರ್ಪಿಸಲು ಬಯಸುತ್ತೇನೆ. ಪ್ರಶಸ್ತಿ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ನೀಡಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಮಕ್ಕಳು ಮಾತ್ರ ಪಂ. ಮಲ್ಲಿಕಾರ್ಜುನ ಮನಸೂರ ಅವರ ಕನಸನ್ನು ನನಸು ಮಾಡಬಲ್ಲರು ಎಂದು ತಿಳಿಸಿದರು.
ಮಕ್ಕಳಿಗೆ ನಮ್ಮ ಸಂಗೀತ ಪರಂಪರೆಯನ್ನು ಪರಿಚಯಿಸಬೇಕು. ಸಂಸ್ಕೃತಿಯ ಹಿರಿಮೆಯನ್ನು ತಿಳಿಸಿಕೊಡಬೇಕು. ಆಸಕ್ತ ಮಕ್ಕಳು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ತರಬೇತಿ ನೀಡಬೇಕು. ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ಧಾರವಾಡ ನೆಲದಲ್ಲಿ ಸಂಗೀತಕ್ಕೆ ಅನೇಕ ಮಹನೀಯರು ಕೊಡುಗೆ ನೀಡಿದ್ದಾರೆ. ಮನಸೂರ ಅವರನ್ನು ಸ್ಮರಿಸುವುದು ಭಾರತೀಯ ಪರಂಪರೆಯನ್ನು ಗೌರವಿಸಿದಂತೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಹಾಗೂ ಟ್ರಸ್ಟ್ ಅಧ್ಯಕ್ಷೆ ದಿವ್ಯಪ್ರಭು ಮಾತನಾಡಿ, ಸಾಂಸ್ಕೃತಿಕ ಕೇಂದ್ರವಾದ ಧಾರವಾಡದಲ್ಲಿ ಆರು ಟ್ರಸ್ಟ್ ಕಾರ್ಯನಿರ್ವಹಿಸುತ್ತಿವೆ. ಎಲ್ಲ ಟ್ರಸ್ಟ್‌ಗಳು ಸಮನ್ವಯತೆಯಿಂದ ಕಾರ್ಯಕ್ರಮ ಆಯೋಜಿಸಿದ ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ತಿಳಿಸಿಕೊಡುವುದು ಅವಶ್ಯಕ ಎಂದರು.
ಕಾರ್ಯಕ್ರಮದಲ್ಲಿ ಪಂ.ವೆಂಕಟೇಶ ಕುಮಾರ, ಶಂಕರ ಕುಂಬಿ, ಕೆ.ಎಚ್. ಚನ್ನೂರ, ಕುಮಾರ ಬೆಕ್ಕೇರಿ, ಡಾ. ದಿಲೀಪ ದೇಶಪಾಂಡೆ, ನೀಲಾ ಎಂ ಕೊಡ್ಲಿ, ಸೇರಿದಂತೆ ಇತರರು ಇದ್ದರು. ಬೆಂಗಳೂರಿನ ಪಂ. ಡಿ. ಕುಮಾರ ದಾಸ ಅವರಿಗೆ ಪದ್ಮವಿಭೂಷಣ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದರೆ, ಶಿರಸಿಯ ವಿನಾಯಕ ಹೆಗಡೆ ಅವರಿಗೆ
ಪದ್ಮವಿಭೂಷಣ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಯುವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಉಭಯ ಕಲಾವಿದರಿಂದ ಗಾಯನ ಜರುಗಿತು.

ಮಕ್ಕಳಿಗೆ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ ಬೆಳೆಸಿ
ಪ್ರಸ್ತುತ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆಯಿಂದ ಯುವ ಸಮುದಾಯದ ಭವಿಷ್ಯ ಹಾಳಾಗುತ್ತಿದೆ. ನಮ್ಮ ಸಂಸ್ಕೃತಿ ಬದಲಾಗುತ್ತಿದೆ. ಕ್ರಿಕೆಟ್ ಹಾಗೂ ಸಿನೆಮಾಕ್ಕೆ ಆದ್ಯತೆ ನೀಡುವ ಮಕ್ಕಳು ಶಾಸ್ತ್ರೀಯ ಸಂಗೀತದಿಂದ ವಿಮುಖರಾಗುತ್ತಿದ್ದಾರೆ. ಅವರಿಗೆ ಆಸಕ್ತಿ ಮೂಡಿಸುವ ಕೆಲಸವಾಗಬೇಕಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್ ಜೆ ತಿಳಿಸಿದರು.

ಸಂಗೀತ ಶಾಲೆ ಆರಂಭಿಸುವವರಿಗೆ ಹುಡಾ ಸಿಎ ಸೈಟ್
ಧಾರವಾಡದ ಸಂಗೀತ ಘರಾಣಾ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಸಂಗೀತ ಶಾಲೆಗಳ ಸಂಖ್ಯೆ ಹೆಚ್ಚಿಸಬೇಕು. ಆಸಕ್ತರು ಶಿಸ್ತು ಬದ್ಧವಾಗಿ, ಮುಂದಿನ ಪೀಳಿಗೆಗೆ ಸಂಗೀತ ಜ್ಞಾನ ಧಾರೆ ಎರೆಯುವ ಧ್ಯೇಯೋದ್ದೇಶ ಹೊಂದಿರುವವರು ಸಂಗೀತ ಶಾಲೆಗಳನ್ನು ಆರಂಭಿಸುವಂತಿದ್ದರೆ ಅಂಥವರಿಗೆ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಿಎ ಸೈಟ್ ನೀಡಲು ಸಿದ್ಧ ಎಂದು ಹುಡಾ ಅಧ್ಯಕ್ಷ ಶಾಕೀರ ಸನದಿ ಭರವಸೆ ನೀಡಿದರು.