ಮದುವಣಗಿತ್ತಿಯಂತೆ ಸಿಂಗಾರಗೊಂಡ ಸಕ್ಕರೆ ನಗರಿ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ

ಮಂಡ್ಯ: ಮಂಡ್ಯ ಸಕ್ಕರೆ ನಾಡು, ಅಥಿತಿಗಳಿಗೆ ಅಕ್ಕರೆಯ ಬೀಡಾಗಿರುವ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡದ ಕಂಪು ಸೂಸಲು ಸುಜ್ಜಾಗಿದ್ದು, ತಳಿರು ತೋರಣ, ದೀಪಾಲಂಕಾರದಿಂದ ಇಡೀ ನಗರವೇ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ವಿಶಾಲವಾಗಿ ಚಾಚಿಕೊಂಡಿರುವ ಹೆದ್ದಾರಿ ಇಕ್ಕೆಲದಲ್ಲಿ ಸಾಹಿತಿ- ಕವಿಗಳ ಘೋಷ ವಾಕ್ಯಗಳು, ಕನ್ನಡ- ಬಾವುಟ, ಕಬ್ಬಿನ ಜಲ್ಲೆ-ಬಾಳೆ ಕಂದು- ಮಾವಿನ ಸೊಪ್ಪಿನಿಂದ ನಿರ್ಮಿಸಿದ ಹಸಿರು ತೋರಣ, ಒಪ್ಪ ಓರಣ ವಾಗಿರುವ ರಸ್ತೆಗಳು ನಾಡಿನ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಸಾಹಿತ್ಯಾಸಕರನ್ನು ಸ್ವಾಗತಿಸುತ್ತಿವೆ. ಮನೆ ಮನೆಗೆ ಕನ್ನಡ ಬಾವುಟ: ನುಡಿಜಾತ್ರೆ ಅಂಗವಾಗಿ ಮಂಡ್ಯ ನಗರಿ ಸಕಲ ರೀಚಿಯಲ್ಲೂ ಸಜ್ಜಾಗಿದ್ದು, ನಗರದ 25 ಸಾವಿರಕ್ಕೂ ಹೆಚ್ಚು ಮನೆಗಳ ಮೇಲೆ ಕನ್ನಡ ಬಾವುಟ ರಾರಾಜಿಸುತ್ತಿದೆ. ಇದಷ್ಟೇ ಅಲ್ಲದೇ ಮಂಡ್ಯ ನಗರದ ಎಲ್ಲಾ ರಸ್ತೆ, ಪ್ರಮುಖ ವೃತ್ತಗಳಲ್ಲಿ ಕೆಂಪು-ಹಳದಿ ಬಣ್ಣದ ಬಂಟಿಂಗ್ಸ್ ಕಂಗೊಳಸುತ್ತಿದೆ.

ವರ್ಣಚಿತ್ರಾಲಂಕಾರ: ನಗರದ ಹೃದಯ ಭಾಗ, ಮುಖ್ಯ ರಸ್ತೆಯ ಇಕ್ಕೆಲದಲ್ಲಿನ ಕಟ್ಟಡಗಳು, ಕಾಂಪೌಂಡ್ ಗಳಲ್ಲಿ ಜಿಲ್ಲೆಯ ಪ್ರೇಕ್ಷಣಿಯ ಸ್ಥಳಗಳು ನಾಡಿನ ಜ್ಞಾನಪೀಠ ಪುರಸ್ಕೃತರು, ಕವಿಗಳು, ಸಾಹಿತಿಗಳ ಚಿತ್ರಗಳು ಕಂಗೊಳಿಸುತ್ತಿದೆ.