ಆರ್‌ಎಸ್‌ಎಸ್ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ
ಹುಬ್ಬಳ್ಳಿ: ಕಾಂಗ್ರೆಸ್ ಕುಮ್ಮಕ್ಕಿನಿಂದಲೇ ಮತಾಂಧ ಶಕ್ತಿಗಳು ದುಂಡಾವರ್ತನೆ ತೋರುತ್ತಿವೆ. ಕೆಜೆ ಹಳ್ಳಿ-ಡಿಜೆ ಹಳ್ಳಿ, ಹಳೇ ಹುಬ್ಬಳ್ಳಿ ಮತ್ತು ಮೈಸೂರಿನ ಉದಯಗಿರಿಯಲ್ಲಿ ನಡೆದ ಗಲಭೆಗಳೇ ಇದಕ್ಕೆ ಸಾಕ್ಷಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ತುಷ್ಠೀಕರಣ ನೀತಿಯ ಪರಿಣಾಮವಾಗಿ ಇಸ್ಲಾಮಿಕ್ ಮತಾಂಧ ಶಕ್ತಿಗಳು ಬಾಲ ಬಿಚ್ಚುತ್ತಿವೆ. ಕೆಜೆ ಹಳ್ಳಿ-ಡಿಜೆ ಹಳ್ಳಿ ಹಾಗೂ ಹಳೇ ಹುಬ್ಬಳ್ಳಿಯ ಗಲಭೆಕೋರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿದ್ದರೆ ಇಂದು ಮೈಸೂರಿನಲ್ಲಿ ಗಲಭೆ ನಡೆಯುತ್ತಿರಲಿಲ್ಲ. ಕಾಂಗ್ರೆಸ್‌ನ ಎಡಬಿಡಂಗಿ ತನದಿಂದ ಗಲಭೆಗಳು ಮರುಕಳಿಸುತ್ತಿವೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮತಾಂಧ ಶಕ್ತಿಗಳು ದೊಡ್ಡ ಮಟ್ಟದಲ್ಲಿ ತಲೆ ಎತ್ತುತ್ತಿವೆ. ಮೈಸೂರಿನ ಉದಯಗಿರಿಯಲ್ಲಿ ನಡೆದ ಘಟನೆ ಪೂರ್ವ ನಿಯೋಜಿತ ಎಂಬುವುದರಲ್ಲಿ ಅನುಮಾನವೇ ಇಲ್ಲ. ಘಟನೆಯ ಸಂಬಂಧ ಸಂಪೂರ್ಣ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಲಾಗಿದೆ. ತುಷ್ಠೀಕರಣ ನೀತಿ ಹೀಗೇ ಮುಂದುವರೆದರೆ ರಾಜ್ಯದಿಂದಲೂ ಕಾಂಗ್ರೆಸ್ ನಿರ್ನಾಮ ಆಗಲಿದೆ ಎಂದು ಎಚ್ಚರಿಸಿದರು.
ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಮ್ಮ ಐಡಿಯಾಲಜಿಗೆ ತಕ್ಕಂತೆ ಮಾತನಾಡುವುದನ್ನು ಬಿಟ್ಟು, ಗಲಭೆಯ ವೇಳೆ ಆದ ನಷ್ಟವನ್ನು ಗಲಭೆಕೋರರಿಂದ ಒದ್ದು ವಸೂಲಿ ಮಾಡಬೇಕು. ಸರ್ಕಾರಕ್ಕೆ ತಾಕತ್ತಿದ್ದರೆ ಇದನ್ನು ಮಾಡಲಿ ಎಂದು ಸವಾಲು ಹಾಕಿದರು. ಅಲ್ಲದೆ, ಆರ್‌ಎಸ್‌ಎಸ್ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಎಚ್ಚರಿಸಿದರು.
ಕಾಂಗ್ರೆಸ್‌ನ ಆಂತರಿಕ ಭಿನ್ನಾಭಿಪ್ರಾಯ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ದಲಿತರು ಸಿಎಂ ಆಗಲು ನಮ್ಮ ವಿರೋಧ ಇಲ್ಲ. ಆದರೆ, ಇದನ್ನು ಹಾದಿ ಬಿದಿ ರಂಪ ಮಾಡಿ ಆಡಳಿತಯಂತ್ರ ಕುಸಿಯುವಂತೆ ಮಾಡಿದರೆ ಸಹಿಸಲು ಆಗುವುದಿಲ್ಲ ಎಂದರು.