ಮಣಿಪಾಲ ಮಾಹೆ ಮೊದಲ ಉಪಕುಲಪತಿ ಡಾ.ವಲಿಯಥಾನ್ ನಿಧನ

0
11

ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ (ಮಾಹೆ)ನ ಮೊದಲ ಉಪಕುಲಪತಿ ಹಾಗೂ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಮಾರ್ತಾಂಡ ವರ್ಮ ಶಂಕರನ್ ವಲಿಯಥಾನ್ (ಎಂ.ಎಸ್. ವಲಿಯಥಾನ್) ಬುಧವಾರ ರಾತ್ರಿ ಮಣಿಪಾಲದಲ್ಲಿ ನಿಧನರಾದರು.
ಅವರಿಗೆ 90 ವರ್ಷ ವಯಸ್ಸಾಗಿತ್ತು. ತಿರುವನಂತಪುರ ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ್ದ ಅವರು, ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ ಆಫ್‌ ಎಡಿನ್‌ಬರ್ಗ್ ಮತ್ತು ಕೆನಡಾದಿಂದ ಫೆಲೋಶಿಪ್ ಪಡೆದಿದ್ದರು. ಹೃದಯ ಶಸ್ತ್ರಚಿಕಿತ್ಸೆ ಮತ್ತು ವೈದ್ಯಕೀಯ ತಂತ್ರಜ್ಞಾನಕ್ಕೆ ಗಮನಾರ್ಹ ಕೊಡುಗೆ ನೀಡಿದ ಡಾ. ವಲಿಯಥಾನ್, ತಿರುವನಂತಪುರದಲ್ಲಿ ಶ್ರೀ ಚಿತ್ರ ತಿರುನಾಳ್ ಸಂಸ್ಥೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಡಿಸ್ಪೋಸೆಬಲ್ ಬ್ಲಡ್ ಬ್ಯಾಗ್ ಮತ್ತು ಟಿಲ್ಡಿಂಗ್ ಡಿಸ್ಕ್ ಹೃದಯ ಕವಾಟದಂಥ ವೈದ್ಯಕೀಯ ಸಾಧನಗಳನ್ನು ಅಭಿವೃದ್ಧಿಪಡಿಸುವಲ್ಲಿ ಡಾ. ವಲಿಯಥಾನ್ ಕೊಡುಗೆ ಗಮನೀಯ. 1993ರಿಂದ ಮಣಿಪಾಲ ಮಾಹೆಯಲ್ಲಿ ಕುಲಪತಿಯಾಗಿ ಅವರು ಕಾರ್ಯನಿರ್ವಹಿಸಿದ್ದರು. 2002ರಲ್ಲಿ ಪದ್ಮಶ್ರೀ ಮತ್ತು 2005ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಡಾ. ಬಿ. ಸಿ. ರಾಯ್ ರಾಷ್ಟ್ರೀಯ ಪ್ರಶಸ್ತಿ, ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ನ ಹಂಟೇರಿಯನ್ ಪ್ರೊಫೆಸರ್‌ಶಿಪ್, ಫ್ರೆಂಚ್ ಸರ್ಕಾರದಿಂದ ಚೆವಲಿಯರ್ ಆಫ್ ದಿ ಆರ್ಡರ್ ಆಫ್ ಪಾಮ್ಸ್ ಅಕಾಡೆಮಿಕ್ಸ್, ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಿಂದ ಅಂತಾರಾಷ್ಟ್ರೀಯ ವೈದ್ಯಕೀಯ ಶಿಕ್ಷಣಕ್ಕಾಗಿ ಡಾ. ಸ್ಯಾಮ್ಯುಯೆಲ್ ಪಿ. ಆಸ್ಪರ್ ಪ್ರಶಸ್ತಿ ಮತ್ತು ಭಾರತೀಯ ವೈದ್ಯಕೀಯ ಸಂಘದಿಂದ ಜೀವಮಾನ ಸಾಧನೆ ಪ್ರಶಸ್ತಿಯೂ ಲಭಿಸಿತ್ತು.

Previous articleಬಿಲ್ ಮಂಜೂರಾತಿ ಮಾಡಲು ಪ್ರೋಸೆಸ್ ಇಲ್ಲವೇ ?
Next articleಜನ್ಮದಿನದ ಸಂಭ್ರಮದಲ್ಲಿ RCB ನಾಯಕಿ