ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪರ್ಧಿಸುವುದು ಅಧಿಕೃತವಾಗಿ ಘೋಷಣೆಯಾಗಿದೆ.
ಬೆಂಗಳೂರಿನಲ್ಲಿ ಶಾಸಕ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಮಂಗಳವಾರ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ವಿಸ್ತೃತ ಚರ್ಚೆಯ ಬಳಿಕ ಮಂಡ್ಯದಿಂದ ಎಚ್.ಡಿ.ಕುಮಾರಸ್ವಾಮಿ ಅವರೇ ಸ್ಪರ್ಧಿಸಬೇಕೆಂಬ ಒಕ್ಕೊರಲ ತೀರ್ಮಾನವಾಯಿತು. ಇದರ ಬೆನ್ನಲ್ಲೇ ಹಾಸನದಲ್ಲಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪುತ್ರನ ಸ್ಪರ್ಧೆಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಹಾಸನದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಎಸ್‌ಸಿ/ಎಸ್‌ಟಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ದೇವೇಗೌಡರು ಕುಮಾರಸ್ವಾಮಿ ಸ್ಪರ್ಧೆಯನ್ನು ಅಧಿಕೃತವಾಗಿ ಖಚಿತಪಡಿಸಿದರು. ಇದೇ ವೇಳೆ ಕೋಲಾರ ಲೋಕಸಭಾ ಕ್ಷೇತ್ರದಿಂದ ಮಲ್ಲೇಶ್‌ಬಾಬು ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದನ್ನೂ ಘೋಷಿಸಿದರು. ಈಗಾಗಲೇ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ಅಬಾಧಿತವಾಗಿರುವ ಹಿನ್ನೆಲೆಯಲ್ಲಿ ಎನ್‌ಡಿಎ ಜೊತೆಗಿನ ಮೈತ್ರಿಯಿಂದ ಜೆಡಿಎಸ್ ಪಾಲಿಗೆ ದೊರೆತ ಮೂರು ಕ್ಷೇತ್ರಗಳ ಉಮೇದುವಾರರನ್ನು ಘೋಷಿಸಿದಂತಾಗಿದೆ. ದೇವೇಗೌಡರ ಈ ಅಧಿಕೃತ ಘೋಷಣೆಯಿಂದ ಬಹುದಿನಗಳಿಂದ ರಾಜ್ಯ ರಾಜಕೀಯ ವಲಯದಲ್ಲಿ ಗರಿಗೆದರಿದ್ದ ಕುತೂಹಲಕ್ಕೆ ಕಡೆಗೂ ತೆರೆಬಿದ್ದಿದೆ. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಸೋತ ನೆಲದಿಂದಲೇ ಗೆಲುವಿನ ಬೆಳೆ ತೆಗೆಯಲು ತೆನೆಹೊತ್ತ ಮಹಿಳೆಯ ಅಭ್ಯರ್ಥಿಯಾಗಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸುತ್ತಿರುವುದು ಸಹಜವಾಗಿ ಕುತೂಹಲ ಹುಟ್ಟುಹಾಕಿದೆ.
ನಾರಾಯಣಗೌಡ ಹಿಂದಕ್ಕೆ: ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಅಸಮಾಧಾನಗೊಂಡಿದ್ದ ಕೆ.ಆರ್.ಪೇಟೆ ಮಾಜಿ ಶಾಸಕ ನಾರಾಯಣಗೌಡ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವರೆಂಬ ಊಹಾಪೋಹಕ್ಕೆ ತೆರೆಬಿದ್ದಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಸೇರುವುದಿಲ್ಲವೆಂದು ಸ್ವತಃ ನಾರಾಯಣಗೌಡ ಮಂಗಳವಾರ ಪ್ರಕಟಿಸಿದ್ದು ಮೈತ್ರಿಕೂಟಕ್ಕೆ ಬಲ ಬಂದಿದೆ.


























