ಮಂಡ್ಯದಿಂದಲೇ ಸ್ಪರ್ಧೆ ಸುಮಲತಾ ನಿರ್ಧಾರ

0
11
ಸುಮಲತಾ

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದಲೇ ಸಂಸದೆ ಸುಮಲತಾ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು ಮಂಡ್ಯ ರಣಕಣವನ್ನು ರಂಗೇರಿಸಿದೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಂಡ್ಯ ಜಿಲ್ಲೆಯ ಮುಖಂಡರೊಡನೆ ನಡೆಸಿದ ಬೆಂಬಲಿಗರ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯದ ಅನುಸಾರ ಮಂಡ್ಯ ಲೋಕಸಭಾ ಕ್ಷೇತ್ರದಿಂದಲೇ ಕಣಕ್ಕಿಳಿಯಲು ಸುಮಲತಾ ತೀರ್ಮಾನಿಸಿದ್ದಾರೆಂದು ತಿಳಿದುಬಂದಿದೆ.
ನಟ ದರ್ಶನ್ ತೂಗುದೀಪ, ನಿರ್ಮಾಪಕ ರಾಕಲೈನ್ ವೆಂಕಟೇಶ್, ಶ್ರೀರಂಗಪಟ್ಟಣದ ಮುಖಂಡ ಇಂಡವಾಳು ಸಚ್ಚಿದಾನಂದ, ಮಂಡ್ಯ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಮುಖಂಡರೂ ಸೇರಿದಂತೆ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖರೆಲ್ಲರೂ ಮಂಡ್ಯದಿಂದಲೇ ಸ್ಪರ್ಧಿಸುವಂತೆ ಸುಮಲತಾ ಅವರನ್ನು ಒತ್ತಾಯಿಸಿದರೆನ್ನಲಾಗಿದೆ.
ಸುಮಾರು ಎರಡು ತಾಸಿಗೂ ಅಧಿಕ ಕಾಲ ನಡೆದ ಸುದೀರ್ಘ ಸಭೆಯಲ್ಲಿ ಮಂಡ್ಯದಿಂದಲೇ ಅದು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿಯೇ ಸ್ಪರ್ಧಿಸುವ ಕುರಿತು ವಿಸ್ತೃತ ಮಾತುಕತೆ ನಡೆಯಿತೆನ್ನಲಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಯಾರಿಗೆಂಬುದು ಇನ್ನೂ ಅಂತಿಮಗೊಂಡಿಲ್ಲವಾದ್ದರಿಂದ ಬಿಜೆಪಿ ರಾಷ್ಟ್ರೀಯ ನಾಯಕರ ಮನವೊಲಿಸಿ ಮಂಡ್ಯದಿಂದಲೇ ಬಿಜೆಪಿ ಹುರಿಯಾಳಾಗಿ ಸ್ಪರ್ಧಿಸಬೇಕೆಂದು ಬೆಂಬಲಿಗರ ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದರೆನ್ನಲಾಗಿದೆ. ನಟ ದರ್ಶನ್ ತೂಗುದೀಪ ಅವರು ತಾವು ಸುಮಲತಾ ಅಮ್ಮನ ಪರವಾಗಿದ್ದು ಯಾವುದೇ ಪಕ್ಷದಿಂದ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ತಾವು ಕಳೆದ ಬಾರಿಯಂತೆ ವ್ಯಾಪಕ ಪ್ರಚಾರ ಕೈಗೊಳ್ಳುವುದಾಗಿ ಸಭೆಗೆ ಭರವಸೆ ನೀಡಿದರೆನ್ನಲಾಗಿದೆ.
ಮಂಡ್ಯ ಲೋಕಸಭಾ ಟಿಕೆಟ್‌ಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಮನವೊಲಿಸುವ ಯತ್ನ ಮಾಡುವ ಕುರಿತು ಬೆಂಬಲಿಗರ ಸಭೆಯಲ್ಲಿ ಕೋರಿಕೊಂಡರೆನ್ನಲಾಗಿದೆ. ಅದರನ್ವಯ ಒಂದೆರಡು ದಿನಗಳಲ್ಲಿ ಸುಮಲತಾ ಬೆಂಬಲಿಗರ ಪಡೆ ರಾಜ್ಯಸಭಾ ಚುನಾವಣೆಯ ಬಳಿಕ ರಾಜ್ಯ ಬಿಜೆಪಿ ನಾಯಕರನ್ನು ಖುದ್ದಾಗಿ ಭೇಟಿ ಮಾಡುವರೆಂದು ತಿಳಿದುಬಂದಿದೆ.
ಈ ಮಧ್ಯೆ ಮರ‍್ನಾಲ್ಕು ದಿನಗಳಲ್ಲಿ ಸುಮಲತಾ ಅವರು ದೆಹಲಿಗೆ ಪ್ರಯಾಣ ಬೆಳೆಸಲಿದ್ದು ಬಿಜೆಪಿ ವರಿಷ್ಠರೊಂದಿಗೆ ಮತ್ತೊಂದು ಸುತ್ತಿನ ಮಾತಕತೆ ನಡೆಸಲು ನಿರ್ಧರಿಸಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ. ಸುಮಲತಾ ಅವರ ಈ ನಿರ್ಧಾರದಿಂದ ಮಂಡ್ಯ ಲೋಕಸಭಾ ಕಣ ರೋಚಕ ಘಟ್ಟಕ್ಕೆ ಬಂದು ನಿಂತಿದ್ದು ಈ ಬಾರಿ ಬಿಜೆಪಿ ಟಿಕೆಟ್ ಯಾರಿಗೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

Previous articleಸಂವಿಧಾನ ಬದಲಾಯಿಸಲು ಬಂದಿರುವವರನ್ನು ಅಧಿಕಾರದಿಂದ ಕಿತ್ತೊಗೆಯದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ
Next articleಹೈಕೋರ್ಟ್ ಸಿಜೆಯಾಗಿ ಅಂಜಾರಿಯ ಪ್ರಮಾಣ ವಚನ ಸ್ವೀಕಾರ