ಕಲಬುರಗಿ: ಎರಡು ತಿಂಗಳ ಹಿಂದೆ ಮಂಗಳಮುಖಿಯನ್ನು ಬೆತ್ತಲೆ ಮಾಡಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಇಲ್ಲಿನ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆ ಎರಡು ತಿಂಗಳ ಹಿಂದೆ ನಗರದ ಕೇಂದ್ರ ಬಸ್ ನಿಲ್ದಾಣದ ಹಿಂದೆ ನಡೆದಿತ್ತು. ಘಟನೆಯಲ್ಲಿರುವ ಮಂಗಳಮುಖಿಯರಿಂದಲೇ ಭಾನುವಾರವೂ ಪರಸ್ಪರ ಹೊಡೆದಾಡಿಕೊಂಡಿರುವ ಹಿನ್ನೆಲೆ ಯಾರೋ ಹಳೆಯ ವಿಡಿಯೋ ವೈರಲ್ ಮಾಡಿದ್ದರು. ಭಾನುವಾರ ನಡೆದ ಘಟನೆಯಲ್ಲಿ ಗಾಯಗೊಂಡಿರುವ ಭವಾನಿ ಜಮಾದಾರ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಂಕಿತಾ ಚವ್ಹಾಣ ಮತ್ತು ಇನ್ನೊಬ್ಬ ವ್ಯಕ್ತಿ ವಿರುದ್ಧ ಕ್ರಮಕೈಗೊಳ್ಳುವಂತೆ ಭವಾನಿ ಜಮಾದಾರ ಅಶೋಕ ನಗರ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಗಂಗಾ ನಗರದ ನಿವಾಸಿ ಭವಾನಿ ಜಮಾದಾರ(೨೪) ಅವರು ಭಾನುವಾರ ಬೆಳಗ್ಗೆ ೭ ಗಂಟೆಗೆ ಕೇಂದ್ರ ಬಸ್ ನಿಲ್ದಾಣದಲ್ಲಿ ಭಿಕ್ಷಾಟನೆ ಮಾಡುತ್ತಿರುವಾಗ ಮಂಗಳಮುಖಿಯಾಗಿರುವ ಅಂಕಿತಾ ಚವ್ಹಾಣ ಎಂಬಾಕೆ ವ್ಯಕ್ತಿಯೊಬ್ಬನಿಂದ ಹಲ್ಲೆ ನಡೆಸಿದ್ದಾಳೆ. ಹಲ್ಲೆಯಿಂದ ಗಾಯಗೊಂಡಿರುವ ಭವಾನಿ ಜಮಾದಾರ ಅವಳ ಅಕ್ಕ ಸಂಗೀತಾ, ತಾಯಿ ಕಮಲಾಬಾಯಿ ಕೂಡಿಕೊಂಡು ಅಂಕಿತಾ ಚವ್ಹಾಣ್‌ಳನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿ ಹಲ್ಲೆ ನಡೆಸಿದ್ದಾರೆ.
ಅಂಕಿತಾ ಚವ್ಹಾಣ ಮತ್ತು ಇನ್ನೊಬ್ಬ ವ್ಯಕ್ತಿ ವಿರುದ್ಧ ಕ್ರಮಕೈಗೊಳ್ಳುವಂತೆ ಭವಾನಿ ಜಮಾದಾರ ಅಶೋಕ ನಗರ ಠಾಣೆಯಲ್ಲಿ ದೂರು ನೀಡಿದ್ದಾಳೆ. ಅಂಕಿತಾ ಚವ್ಹಾಣ ಇತರರು ಸೇರಿ ಭವಾನಿ ಜಮಾದಾರ ಅವರನ್ನು ಎರಡು ತಿಂಗಳ ಹಿಂದೆ ಅಪಹರಿಸಿ ಬಸ್ ನಿಲ್ದಾಣದ ಹಿಂದೆ ಬೆತ್ತಲೆಗೊಳಿಸಿ ಕೇಶ ಮುಂಡನ ಮಾಡಿರುವ ಪ್ರಕರಣ ಕುರಿತಂತೆಯೂ ಸೋಮವಾರ ಭವಾನಿ ಜಮಾದಾರ ದೂರು ನೀಡಿದ್ದಾಳೆ.
ಸುಲ್ತಾನಪುರದ ನಿವಾಸಿ ಅಂಕಿತಾ ಚವ್ಹಾಣ(೨೪) ಅವರು ಸಹ ಅಶೋಕ ನಗರ ಠಾಣೆಯಲ್ಲಿ ಭವಾನಿ ಜಮಾದಾರ, ಸಂಗೀತಾ, ಶೀಲಾ, ಮಾಲಾ ಮತ್ತು ಮಲ್ಲು ಅವರು ಸೇರಿ ಬಸ್ ನಿಲ್ದಾಣದ ಬಳಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದು, ಜಾತಿ ನಿಂದನೆಯಡಿಯಲ್ಲಿ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ಇಬ್ಬರು ಮಂಗಳಮುಖಿಯರು ಪರಸ್ಪರ ಜುಟ್ಟು ಹಿಡಿದುಕೊಂಡು ಹೊಡೆದಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.