ಭೇದ ಭಾವ ಮಾಡದೇ ಕಾನೂನು ಶಿಕ್ಷಣ ನೀಡಿದ ಡಾ. ಜಿ.ಎಂ. ಪಾಟೀಲ

0
57

ಧಾರವಾಡ: ಖ್ಯಾತ ನ್ಯಾಯವಾದಿ, ಲೋಕ ಶಿಕ್ಷಣ ಟ್ರಸ್ಟ್‌ನ ಧರ್ಮದರ್ಶಿಗಳಾಗಿದ್ದ ಕೆಪಿಇ ಸಂಸ್ಥೆ ಸಂಸ್ಥಾಪಕ ಡಾ. ಜಿ.ಎಂ. ಪಾಟೀಲ ಅವರ ಜನ್ಮ ಶತಮಾನೋತ್ಸವದ ನಿಮಿತ್ತ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಜಿ.ಎಂ. ಪಾಟೀಲ ಅವರ ಜೀವನ ಸಾಧನೆಯನ್ನು ಸ್ಮರಿಸಿದರು.
ನಗರದ ಕೆಪಿಇಎಸ್ ಸಂಸ್ಥೆಯ ಡಾ. ಜಿ.ಎಂ. ಪಾಟೀಲ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಹಾಗೂ ಬೋಧಕರಲ್ಲಿ ಬದ್ಧತೆಯಿದ್ದರೆ ಮಾತ್ರ ಜ್ಞಾನ ಪ್ರವಾಹ ಹರಿಯಲು ಸಾಧ್ಯವಾಗುತ್ತದೆ. ಯಾವುದೇ ಭೇದ ಭಾವ ಮಾಡದೇ ಕಲಿಯುವ ಆಸಕ್ತಿಯಿಂದ ಬಂದವರಿಗೆ ಕಾನೂನು ಶಿಕ್ಷಣ ನೀಡಿದ ಡಾ. ಜಿ.ಎಂ. ಪಾಟೀಲರ ಕಾರ್ಯ ಅನುಕರಣೀಯವಾದುದು. ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡಿದ ಹಲವರು ವಿವಿಧ ಹುದ್ದೆಗಳನ್ನು ಅಲಂಕರಿಸಿರುವುದು ವಿಶೇಷ ಎಂದರು.
ಜಿ.ಎಂ. ಪಾಟೀಲ ಅವರದು ಉದಾತ್ತ ಹೃದಯ. ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ಗುಣ ಅವರದು. ನನ್ನಲ್ಲಿರುವ ಪ್ರತಿಭೆಯನ್ನು ಗುರುತಿಸಿದ ಪಾಟೀಲರು ಬರೆಯಲು ಪ್ರೇರಣೆ ನೀಡಿದರು. ಅವರಂಥ ಹಲವರ ಪ್ರೋತ್ಸಾಹದಿಂದ ನಾನು ಮಹಾಕಾವ್ಯ ರಚನೆ ಮಾಡಲು ಸಾಧ್ಯವಾಯಿತು ಎಂದು ನೆನಪಿಸಿಕೊಂಡರು.
ಕಾನೂನು ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಧಾರವಾಡಕ್ಕೆ ಹೈಕೋರ್ಟ್ ಪೀಠ ಬರುವಲ್ಲಿ ಜಿ.ಎಂ. ಪಾಟೀಲ ಅವರ ಪ್ರಯತ್ನವನ್ನು ಮರೆಯಲು ಸಾಧ್ಯವಿಲ್ಲ. ಸಮಾಜದ ಒಳಿತಿಗಾಗಿ ಚಿಂತಿಸುತ್ತಿದ್ದ ಅವರು ಕಾಲೇಜ್ ಆರಂಭಿಸಿ ಯಶಸ್ವಿಯಾಗಿ ನಡೆಸಿ ಈಗ ದೊಡ್ಡ ಸಂಸ್ಥೆಯಾಗಿ ಬೆಳೆಸಿದ್ದು ಅಗಾಧ ಸಾಧನೆ ಎಂದರು.
ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿಯಾಗಿ ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ಬೆಳೆಸಿದ್ದು ಶ್ಲಾಘನೀಯ. ಸಾಕಷ್ಟು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಪತ್ರಿಕೆಯ ಧ್ಯೇಯೋದ್ದೇಶಕ್ಕೆ ಧಕ್ಕೆಯಾಗದಂತೆ ನೋಡಿಕೊಂಡರು. ಕಷ್ಟದ ಕಾಲದಲ್ಲಿ ಪತ್ರಿಕೆಯನ್ನು ಬೆಳೆಸಿದ್ದನ್ನು ಮರೆಯುವಂತಿಲ್ಲ ಎಂದು ಅಭಿಪ್ರಾಯಪಟ್ಟರು.
ಜಿ.ಎಂ. ಪಾಟೀಲ ಜನ್ಮಶತಮಾನೋತ್ಸವ ಸಂದರ್ಭವನ್ನು ಕೆಪಿಇ ಸಂಸ್ಥೆಯನ್ನು ಬೆಳೆಸಲು ಪಣ ತೊಡಬೇಕು. ಸಂಸ್ಥೆಯ ಏಳಿಗೆಗೆ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದರು.
ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಅಶೋಕ ಹಾರನಹಳ್ಳಿ ಮಾತನಾಡಿ, ಯಾವುದೇ ಅಪೇಕ್ಷೆ ಮಾಡದೇ ಸಮಾಜಕ್ಕಾಗಿ ಜೀವನ ಸಮರ್ಪಣೆ ಮಾಡಿದ ಡಾ. ಜಿ.ಎಂ. ಪಾಟೀಲ ಅವರೊಬ್ಬ ಕರ್ಮಯೋಗಿ. ಇತರರ ಶ್ರೇಯೋಭಿವೃದ್ಧಿಗಾಗಿ ದುಡಿದ ಮಹಾನುಭಾವ. ಲೋಕ ಶಿಕ್ಷಣ ಟ್ರಸ್ಟ್‌ಗೆ ತಳಹದಿ ಹಾಕಿದ್ದೇ ಜಿ.ಎಂ. ಪಾಟೀಲ ಅವರಂಥ ಮಹಾಮಹಿಮರು. ಅವರು ಆರಂಭಿಸಿದ ಕಾನೂನು ಮಹಾವಿದ್ಯಾಲಯ ನೂರಾರು ಕಾನೂನು ಪದವೀಧರರನ್ನು ಸಮಾಜಕ್ಕೆ ನೀಡಿದೆ ಎಂದು ಸ್ಮರಿಸಿದರು.
ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಯು.ಬಿ. ವೆಂಕಟೇಶ ಮಾತನಾಡಿ, ಜೀವನದುದ್ದಕ್ಕೂ ಮಾಡಿದ ಸತ್ಕಾರ್ಯಗಳಿಂದಾಗಿ ಜಿ.ಎಂ. ಪಾಟೀಲ ಅವರನ್ನು ಜೆಮ್ (ಅನರ್ಘ್ಯ ರತ್ನ) ಎಂದು ಕರೆಯಬಹುದು. ಕೆಪಿಇಎಸ್ ಸಂಸ್ಥೆಯನ್ನು ಬೆಳೆಸುವುದರೊಂದಿಗೆ ನಿಟ್ಟೂರು ಶ್ರೀನಿವಾಸರಾವ, ಬಿ.ಡಿ. ಜತ್ತಿ, ಹಾರನಹಳ್ಳಿ ರಾಮಸ್ವಾಮಿ ಅವರಂಥ ಗಣ್ಯರೊಂದಿಗೆ ಲೋಕ ಶಿಕ್ಷಣ ಟ್ರಸ್ಟ್ ಬೆಳೆಸಿದ ರೀತಿ ಅನನ್ಯವಾದುದು. ಅವರ ಮಾರ್ಗದರ್ಶನ ಸಂಯುಕ್ತ ಕರ್ನಾಟಕ ಪತ್ರಿಕೆ ಪ್ರಗತಿಗೆ ಪೂರಕವಾಯಿತು. ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದ ಪಾಟೀಲರು ಅಮೂಲ್ಯ ಕೃತಿಗಳನ್ನು ನೀಡಿದ್ದಾರೆ ಎಂದರು.
ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಡಿ.ಆರ್. ಪಾಟೀಲ, ನ್ಯಾಯಮೂರ್ತಿ ಕೆ. ಶ್ರೀಧರರಾವ್, ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ ಮಾಜಿ ಸಚಿವ ಬಿ.ಆರ್. ಯಾವಗಲ್ ಮಾತನಾಡಿದರು. ವೇದಿಕೆ ಮೇಲೆ ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಬಿ.ವಿ. ಸೋಮಾಪುರ, ಮಲ್ಲಮ್ಮ ಪಾಟೀಲ ಇದ್ದರು.

Previous articleಓಪಿಎಸ್ ಜಾರಿಗೆ ಸರ್ಕಾರ ಬದ್ಧ
Next articleಮಂತ್ರಾಲಯದ ಶ್ರೀರಾಯರ ಹುಂಡಿಯಲ್ಲಿ 3.48 ಕೋಟಿ ಕಾಣಿಕೆ ಸಂಗ್ರಹ