ದಾವಣಗೆರೆ: ಬಿಜೆಪಿಯಲ್ಲಿ ಗೊಂದಲ ಹುಟ್ಟು ಹಾಕಿ, ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿರುವ ಭಿನ್ನಮತೀಯರ ವಿರುದ್ಧ ಪಕ್ಷದ ರಾಷ್ಟ್ರೀಯ ನಾಯಕರು ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ಭಿನ್ನಮತೀಯರವನ್ನು ಪಕ್ಷದಿಂದ ಉಚ್ಚಾಟಿಸುವಂತೆಯೂ ನಾಳೆ ಬೆಂಗಳೂರಿನ ಸಭೆಯಲ್ಲಿ ನಾವೆಲ್ಲರೂ ಸೇರಿ ಚರ್ಚಿಸಿ, ವರಿಷ್ಟರಿಗೆ ಒತ್ತಾಯಿಸಲಿದ್ದೇವೆ ಎಂದು ಎಂ.ಪಿ.ರೇಣುಕಾಚಾರ್ಯ ಮಾಹಿತಿ ನೀಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಿನ್ನಮತೀಯರು ದೆಹಲಿ ದಂಡಯಾತ್ರೆ ಮಾಡಿದರೂ ಬಿ.ವೈ.ವಿಜಯೇಂದ್ರ ಏನೆಂಬುದು ರಾಷ್ಟ್ರೀಯ ನಾಯಕರಿಗೂ ಗೊತ್ತಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ರಮೇಶ ಜಾರಕಿಹೊಳಿ ಇತರರಿಗೆ ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಏನೆಂಬುದು ದೆಹಲಿ ನಾಯಕರಿಗೂ ಗೊತ್ತಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವ ಕೆಲಸವನ್ನು ವಿಜಯೇಂದ್ರ ಮಾಡುತ್ತಿದ್ದರೆ, ಭಿನ್ನಮತೀಯರ ಗುಂಪು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡುವ ಬದಲಿಗೆ ಸ್ವಪಕ್ಷದವರ ವಿರುದ್ಧವೇ ಮಾತನಾಡುತ್ತಿದೆ ಎಂದು ಕಿಡಿಕಾರಿದರು.
ಭಿನ್ನಮತೀಯರು ಇಷ್ಟೆಲ್ಲಾ ಮಾತನಾಡುತ್ತಿರುವುದು, ಮಾಡುತ್ತಿರುವುದು ಕಾಂಗ್ರೆಸ್ ನಾಯಕರ ಕುಮ್ಮಕ್ಕಿನಿಂದ. ನಮಗೂ ದೆಹಲಿಗೆ ಹೋಗುವುದು ಗೊತ್ತು. ಸಭೆ ಮಾಡುವುದೂ ನಮಗೆ ಗೊತ್ತು. ಬಿಜೆಪಿಯನ್ನು ಹಾಳು ಮಾಡುವುದಕ್ಕೆ ಭಿನ್ನಮತೀಯರು ಹೀಗೆಲ್ಲಾ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಭಿನ್ನಮತೀಯರೆಲ್ಲಾ ಚುನಾವಣೆಗೆ ಸ್ಪರ್ಧೆ ಮಾಡಲಿ, ಯಾರ ಯೋಗ್ಯತೆ ಏನೆಂಬುದು ಅವಾಗ ಗೊತ್ತಾಗುತ್ತದೆ ಎಂದು ಅವರು ತಿಳಿಸಿದರು.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶ್ರೀರಾಮುಲುಗೆ ಎತ್ತಿ ಕಟ್ಟಲು ಪ್ರಯತ್ನಿಸಿದರಾದರೂ, ರಾಮುಲು ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲಿಲ್ಲ. ಈಗ ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ ಹೆಸರುಗಳನ್ನು ಸುಮ್ಮನೇ ಎಳೆದು ತರುತ್ತಿದ್ದಾರೆ. ನಾವು ಎಲ್ಲರೂ ಸೇರಿಕೊಂಡು, ದೆಹಲಿಗೆ ಹೋಗುವುದಕ್ಕೆ ಸಿದ್ಧರಿದ್ದೇವೆ. ನಮಗೇನು ದೆಹಲಿ ದಾರಿಯೇನು ಗೊತ್ತಿಲ್ಲವೇ? ಇಂತಹ ಭಿನ್ನಮತೀಯರ ತಲೆ ಹರಟೆ ಹೆಚ್ಚಾಗಿದೆ. ಇದರಿಂದ ಪಕ್ಷದ ವರ್ಚಸ್ಸು ಸಹ ಕಡಿಮೆಯಾಗುತ್ತಿದೆ ಎಂದು ಅವರು ದೂರಿದರು.
ಬಿಜೆಪಿ ಸಂಘಟನೆಗೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶ್ರಮಿಸುತ್ತಿದ್ದಾರೆ. ಭಿನ್ನಮತೀಯರ ವಿರುದ್ಧ ಬೆಂಗಳೂರಿನಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಫೆ. 5ರಂದು ನಾವೂ ಸಭೆ ಸೇರಲಿದ್ದೇವೆ. ಭಿನ್ನಮತೀಯರ ವಿರುದ್ಧ ಹೇಗೆ ಹೋರಾಟ ಮಾಡಬೇಕೆಂಬ ಬಗ್ಗೆ ಬುಧವಾರದ ಸಭೆಯಲ್ಲಿ ನಾವೆಲ್ಲರೂ ತೀರ್ಮಾನ ಮಾಡುತ್ತೇವೆ. ನಾವೆಲ್ಲಾ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬೆನ್ನಿಗೆ ನಿಲ್ಲುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.