ಬನಹಟ್ಟಿಯ ಗುಡ್ಡದ ಲಕ್ಷ್ಮೀ ಜಾತ್ರಾ ಮಹೋತ್ಸವದಂಗವಾಗಿ ಕಳಸೋತ್ಸವ ದಿನವಾದ ಬುಧವಾರ ಭಾವೈಕ್ಯತೆ ಬೆಸೆಯುವ ಬುತ್ತಿ ಜಾತ್ರೆಯಲ್ಲಿ ಹಲವು ಮನಸುಗಳ ಸಂಮಗವಾಯಿತು.
ಬಡವ, ಶ್ರೀಮಂತ, ಮೇಲು-ಕೆಳ ಜಾತಿಯೆಂಬ ಅಂತರವಿಲ್ಲದೇ ಎಲ್ಲರೂ ಒಂದೆಡೆ ಬುತ್ತಿ ಹಂಚಿ ತಿಂದರು.ಪ್ರತಿ ವರ್ಷ ಲಕ್ಷ್ಮೀ ಜಾತ್ರೆಯ ಮಾರನೇ ದಿನ ಕಳಸೋತ್ಸವದಂದು ಜರುಗುವ ಜಾತ್ರೆಯಲ್ಲಿ ಸುತ್ತಲಿನ ಗ್ರಾಮಗಳ ಹಾಗು ತೋಟದ ರೈತರು ರೊಟ್ಟಿ, ತರಹೇವಾರಿ ಪಲ್ಯೆ, ಮೊಸರು, ಕಡಲೆ, ಗುರೆಳ್ಳು ತಂದು ಸವಿಯುತ್ತಾರೆ.
ಹಂಚಿಕೊಂಡು ಭೋಜನ ಸವಿಯುವದು: ಬುತ್ತಿ ಜಾತ್ರೆಯಲ್ಲಿ ಪರಸ್ಪರ ಹಂಚಕಂಡು ಭೋಜನ ಸವಿದರೆ, ಇನ್ನೂ ಸಾವಿರಾರು ಭಕ್ತರಿಗಾಗಿ ಹೆಚ್ಚಿನ ಅಡುಗೆ ತಯಾರಿಸಿಕೊಂಡು ನೂರಾರು ರೈತ ಮಹಿಳೆಯರು ಬೆಳಗ್ಗಿನಿಂದಲೇ ತಲೆ ಮೇಲೆ ಬೃಹದಾಕಾರದ ಬುತ್ತಿ ಹೊತ್ತುಕೊಂಡು ಬರುವದು ಸಾಮಾನ್ಯ.
ಈ ಜಾತ್ರೆಗೆ ಬಂದವರು ಯಾರೂ ಹಾಗೆಯೇ ಹೋಗುವದಿಲ್ಲ. ಇಲ್ಲಿ ಊಟ ಮಾಡಿಯೇ ಹೋಗುತ್ತಾರೆ. ದೇವಸ್ಥಾನ ಸಮಿತಿಯಿಂದ ಕೊರತೆಯಾಗಬಾರದೆಂದು ಸಜ್ಜಕ, ಅನ್ನ-ಸಾಂಬಾರ ಮಾಡಿಸಲಾಗುತ್ತದೆ.