ಭಾರತದಿಂದ ಯುದ್ಧ ತಾಲೀಮು: ನಾಳೆ 244 ಜಿಲ್ಲೆಗಳಲ್ಲಿ ಅಣಕು ಕಾರ್ಯಾಚರಣೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಗುಜರಾತ್‌ನಂತಹ ಗಡಿ ರಾಜ್ಯಗಳು ಸೇರಿದಂತೆ ಭಾರತದ 244 ಜಿಲ್ಲೆಗಳಲ್ಲಿ ಮೇ 7, 2025 ರಂದು ರಾಷ್ಟ್ರವ್ಯಾಪಿ ನಾಗರಿಕ ರಕ್ಷಣಾ ಅಣಕು ಕವಾಯತುಗಳನ್ನು ನಿಗದಿಪಡಿಸಲಾಗಿದೆ. ವಾಯುದಾಳಿ ಸೈರನ್‌ಗಳು, ಬ್ಲ್ಯಾಕೌಟ್‌ಗಳು ಮತ್ತು ಸ್ಥಳಾಂತರಿಸುವ ಪೂರ್ವಾಭ್ಯಾಸವನ್ನು ಯೋಜಿಸಲಾಗಿದೆ. ಪೌರರಿಗೆ ಸ್ವರಕ್ಷಣೆ ತಾಲೀಮು ನಡೆಸುವುದಕ್ಕಾಗಿ ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದೆ.
ಭಾರತದ ಪ್ರತಿ ಹಳ್ಳಿಯಲ್ಲೂ ಮೇ 7ರ ಅಣಕು ಸಮರ ಕಾರ್ಯಾಚರಣೆ ನಡೆಯಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಸೂಚನೆ ನೀಡಿದೆ. ನಾಗರಿಕ ರಕ್ಷಣಾ ಕಾರ್ಯವಿಧಾನಗಳ ಸಿದ್ಧತೆ ಜಾಗೃತಗೊಳಿಸುವ ಹಾಗೂ ಹೆಚ್ಚಿಸುವ ಗುರಿ ಈ ಕಾರ್ಯಾಚರಣೆಯನ್ನು ಎಂದು ಗೃಹ ಸಚಿವಾಲಯದ ಆದೇಶ ತಿಳಿಸಿದೆ. ದೇಶದ 244 ವರ್ಗೀಕೃತ ಜಿಲ್ಲೆಗಳಿಂದ ಗ್ರಾಮ ಮಟ್ಟದವರೆಗೂ ಮಾಕ್​ ಡ್ರಿಲ್​​ ಆಯೋಜಿಸಲು ಕೇಂದ್ರ ಆಜ್ಞೆ ಹೊರಡಿಸಿದೆ. ಗೃಹ ರಕ್ಷಕ ದಳ, NCC, NSS ವಿದ್ಯಾರ್ಥಿಗಳು ಭಾಗವಹಿಸುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆ ನಾಳೆ ಎಲ್ಲಾ ರಾಜ್ಯಗಳಲ್ಲೂ ಯುದ್ಧದ ಸಮಯದಲ್ಲಿ ನಡೆಸುವ ರಕ್ಷಣಾ ಕಾರ್ಯದ ಮಾಕ್​ ಡ್ರಿಲ್ ನಡೆಯಲಿದೆ.