Home ತಾಜಾ ಸುದ್ದಿ ಭಯೋತ್ಪಾದಕ ಪಕ್ಷ ಕಾಂಗ್ರೆಸ್, ಬಿಜೆಪಿ ಅಲ್ಲ

ಭಯೋತ್ಪಾದಕ ಪಕ್ಷ ಕಾಂಗ್ರೆಸ್, ಬಿಜೆಪಿ ಅಲ್ಲ

0
81

ಎಐಸಿಸಿ‌ ಅಧ್ಯಕ್ಷ ಬಾಯ್ತಪ್ಪಿ ಅಂದಿದ್ದಾರೆ;   ಖರ್ಗೆ ಹೇಳಿಕೆಗೆ ‌ ಟಾಂಗ್

ಹುಬ್ಬಳ್ಳಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು “ಕಾಂಗ್ರೆಸ್” ಎನ್ನುವ ಬದಲಾಗಿ ಬಾಯ್ತಪ್ಪಿ ಬಿಜೆಪಿ ಭಯೋತ್ಪಾದಕರ ಪಕ್ಷ ಎಂದಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಶನಿವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿ, ಖರ್ಗೆ ಅವರು ಬಿಜೆಪಿಯನ್ನು ಭಯೋತ್ಪಾದಕ ಪಕ್ಷ ಎಂದಿದ್ದಾರೆ. ಆದರೆ, ವಾಸ್ತವವಾಗಿ ಅವರು ತಮ್ಮ ಪಕ್ಷದಲ್ಲಿ ನಡೆಯುತ್ತಿರುವುದನ್ನು  ಹೇಳಿರಬೇಕು ಎಂದು ಜೋಶಿ ತಿರುಗೇಟು ನೀಡಿದರು.

ಬಾಟ್ಲಾ ಹೌಸ್‌ ಘಟನೆಯಲ್ಲಿ ಭಯೋತ್ಪಾದಕ ಹತರಾಗಿದ್ದಕ್ಕೆ ಖುದ್ದು ಸೋನಿಯಾ ಗಾಂಧಿ ಅವರೇ ಕಣ್ಣೀರು ಹಾಕಿದ್ದರು. ಆದರೆ, ಪೋಲಿಸ್ ಅಧಿಕಾರಿ ಮೋಹನ್ ಚಂದ್ ಶರ್ಮಾ ಮೃತಪಟ್ಟರೆ ಕನಿಷ್ಠ ಸಿಂಪತಿ ಸಹ ವ್ಯಕ್ತಪಡಿಸಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಭಯೋತ್ಪಾದಕರನ್ನು ಬೆಳೆಸಿದ್ದೇ ಕಾಂಗ್ರೆಸ್:
,ಅಫ್ಜಲ್ ಗುರು ವಿಚಾರವಾಗಿ ಮೃದು ಧೋರಣೆ ತೋರಿದ್ದೂ ಕಾಂಗ್ರೆಸ್.  ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ಇರಿಸಿಕೊಂಡು ಎಂತೆಂಥ ಭಯೋತ್ಪಾದಕರನ್ನು ಬೆಳೆಸಿದ್ದೀರಿ ಎಂಬುದು ಇಡೀ ದೇಶಕ್ಕೇ ಗೊತ್ತಿದೆ ಎಂದು ಹೇಳಿದರು.

2004ರಲ್ಲಿ ಭಯೋತ್ಪಾದನಾ ತಡೆ ಕಾಯಿದೆ(POTA) ರದ್ದುಗೊಳಿಸಿದ್ದು ಕಾಂಗ್ರೆಸ್, ಪ್ರಧಾನಿ ಮನಮೋಹನ್ ಸಿಂಗ್ ಪ್ರತ್ಯೇಕತಾವಾದಿ ಉಗ್ರಗಾಮಿಗಳೊಂದಿಗೆ ಕೈಕುಲುಕಿದ್ದು ಇದೆಲ್ಲವನ್ನೂ ಬಹುಶಃ ಖರ್ಗೆ ಅವರು ಮರೆತಿರಬೇಕು ಎಂದು ಜೋಶಿ‌ ಟಾಂಗ್ ನೀಡಿದರು.

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು NIA ತನಿಖೆಯಿಂದ ಹಿಂಪಡೆಯುವ ಮೂಲಕ ಕಾಂಗ್ರೆಸ್ ಪಾರ್ಟಿಯೇ ಇಸ್ಲಾಮಿಕ್ ಭಯೋತ್ಪಾದಕರ ಪಾರ್ಟಿ ಎಂಬುದನ್ನು ಸಾಬೀತುಪಡಿಸಿಕೊಂಡಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಭಯೋತ್ಪಾದನೆ ನಿಗ್ರಹಿಸಿದ್ದೇ ಬಿಜೆಪಿ ಸರ್ಕಾರ:
ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ನೀಗ್ರಹಿಸಿದ್ದೇ ಬಿಜೆಪಿ ಸರ್ಕಾರ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಗಮನಾರ್ಹ ಇಳಿಕೆ ಕಂಡಿದೆ ಎಂದು ಜೋಶಿ ಪ್ರತಿಪಾದಿಸಿದರು.

ಕಾಂಗ್ರೆಸ್ ಆಡಳಿತದಲ್ಲಿ ಕಾಶ್ಮೀರಿ ಯುವಕರ ಕೈಯಲ್ಲಿ ಕಲ್ಲುಗಳಿದ್ದವು. ಆದರೆ, ಇಂದು ಅವರಿಗೆ ಉದ್ಯೋಗವಿದೆ. ಒಬ್ಬ ಹಿರಿಯ ನಾಯಕರಾಗಿ  ಖರ್ಗೆಯವರಿಗೆ ತಾವೇನು ಹೇಳುತ್ತಿರುವೆ ಎಂಬುದರ ಮೇಲೆ ನಿಗಾ ಇರಬೇಕು ಎಂದು ಪ್ರಲ್ಹಾದ ಜೋಶಿ ಟಾಂಗ್ ಕೊಟ್ಟರು.

ತಮ್ಮ ನೇತೃತ್ವಕ್ಕೂ ಮೊದಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಾರಥ್ಯದಲ್ಲಿ ಒಂದು ಕಾಲದಲ್ಲಿ 400 ಸ್ಥಾನಗಳನ್ನು ಗೆದ್ದು ಬೀಗಿದ ತಮ್ಮ ಪಕ್ಷ 25 ರಾಜ್ಯಗಳಲ್ಲಿ ಆಡಳಿತದಲ್ಲಿ.  ಆದರೀಗ ವೋಟ್ ಬ್ಯಾಂಕ್ ಗಾಗಿ ಮತಾಂಧ ಶಕ್ತಿಗಳನ್ನು ಬೆಂಬಲಿಸಿ ಯಾವ ಸ್ಥಿತಿಗೆ ಬಂದಿದೆ? 100 ಕ್ಷೇತ್ರಗಳಲ್ಲೂ ಗೆಲ್ಲಲಾಗಿಲ್ಲ. ಯಾವುದೇ ರಾಜ್ಯಗಳಲ್ಲಿ ನೋಡಿದರೂ ಪ್ರಾದೇಶಿಕ ಪಕ್ಷಗಳ ಕೈ ಹಿಡಿದುಕೊಂಡು ನಡೆಯುವಂತಾಗಿದೆ ಎಂದು ಜೋಶಿ ತಿವಿದರು.

ದಲಿತರಿಗೆ ನಿಜವಾಗಿ ಗೌರವ ಕೊಟ್ಟಿದ್ದೇ ಬಿಜೆಪಿ:
ದೇಶದಲ್ಲಿ ದಲಿತರಿಗೆ ನಿಜವಾಗಿ ಗೌರವ ಕೊಟ್ಟಿದ್ದೇ ಬಿಜೆಪಿ. ಕಾಂಗ್ರೆಸ್ ಯಾವತ್ತೂ ದಲಿತ ವಿರೋಧಿಯಾಗೇ ವರ್ತಿಸುತ್ತಿದೆ. ಹಾಗಾಗಿಯೇ ಕಾಂಗ್ರೆಸ್ ಪಕ್ಷ ಇಂಥ ಸ್ಥಿತಿಗೆ ಬಂದಿದೆ ಎಂದು ಪ್ರಲ್ಹಾದ ಜೋಶಿ ಹೇಳಿದರು.