ದಾವಣಗೆರೆ: ಭದ್ರಾ ಕಾಲುವೆ ನೀರಿನಲ್ಲಿ ಸಿಲುಕಿ ನರಳಾಡುತ್ತಿದ್ದ ನಾಯಿಯನ್ನು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ.
ತಾಲೂಕಿನ ಕಲ್ಪನಹಳ್ಳಿ ಗ್ರಾಮದ ಬಳಿ ಹರಿಯುತ್ತಿರುವ ಭದ್ರಾ ಕಾಲುವೆಯ ನೀರಿನಲ್ಲಿ ಸ್ಥಳೀಯ ಡಾಬಾ ಮಾಲೀಕರ ನಾಯಿ ಕಾಲು ಜಾರಿ ಬಿದ್ದಿದೆ. ಭದ್ರಾ ಕಾಲುವೆ ಸುತ್ತ ಗಿಡಗಂಟೆಗಳು ಬೆಳೆದಿದ್ದರಿಂದ ಕಾಲುವೆಯಿಂದ ಮೇಲೆ ಹತ್ತಲಾಗದೇ ನರಳಾಡುತ್ತಿತ್ತು.
ನಾಯಿಯ ಕಿರುಚಾಟ, ನರಳಾಟ ಕೇಳಿ ಕಾಲುವೆ ಬಳಿ ಲಾರಿ ತೊಳೆಯುತ್ತಿದ್ದ ಚಾಲಕ ಗಮನಿಸಿ ಕೂಡಲೇ ಅಗ್ನಿ ಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಕಾಲುವೆ ಬದಿಯಲ್ಲಿ ಬೆಳೆದಿದ್ದ ಗಿಡಗಂಟೆಗಳನ್ನು ತೆರವುಗೊಳಿಸಿ ನಾಯಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.
ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಕಾಲುವೆಯಿಂದ ಮೇಲೆತ್ತುತ್ತಿದ್ದಂತೆ ನಾಯಿಯ ಮೊಗದಲ್ಲಿ ಮಂದಹಾಸ ಬೀರುತ್ತಿತ್ತು. ಮೂಕ ಪ್ರಾಣಿಯ ಜೀವ ರಕ್ಷಣೆ ಮಾಡಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.