ಭದ್ರಾವತಿ ಶಾಸಕರ ಪುತ್ರನ ಕರೆ ಪ್ರಕರಣಕ್ಕೆ ಹೊಸ ತಿರುವು: ಅನಾಮಧೇಯ ವ್ಯಕ್ತಿ ಕರೆ ಎಂದು ಮಹಿಳಾ ಅಧಿಕಾರಿ ದೂರು

0
14

ಶಿವಮೊಗ್ಗ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಹಿಳಾ ಅಧಿಕಾರಿಗೆ ಭದ್ರಾ ವತಿ ಶಾಸಕರ ಪುತ್ರ ಬೆದರಿಕೆ ಕರೆ ಮಾಡಿದ್ದರು ಎನ್ನಲಾದ ಘಟನೆ ಬೇರೆಯದ್ದೆ ತಿರುವು ಪಡೆದುಕೊಂಡಿದೆ. ಮಹಿಳಾ ಅಧಿಕಾರಿ ಜ್ಯೋತಿ ಅನಾಮಧೇಯ ವ್ಯಕ್ತಿ ಕರೆ ಮಾಡಿ ನಿಂದಿಸಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದು ಅಚ್ಚರಿ ಮೂಡಿಸಿದೆ.
ಭದ್ರಾವತಿ ಗ್ರಾಮಾಂತರ ಭಾಗದ ಸೀಗೆಬಾಗಿಯಲ್ಲಿ ಭದ್ರಾ ನದಿ ಒಡಲಿನಿಂದ ಅಕ್ರಮವಾಗಿ ಮರಳು ತೆಗೆಯುತ್ತಿರುವ ಸ್ಥಳಕ್ಕೆ ಗಣಿ ಅಧಿಕಾರಿ ಜ್ಯೋತಿ ಮತ್ತು ಪ್ರಿಯಾ ಮತ್ತಿತರೆ ಅಧಿಕಾರಿಗಳು ಭಾನುವಾರ ರಾತ್ರಿ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಮರಳು ದಂಧೆಕೋರರು ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಪುತ್ರ ಬಸವೇಶ್‌ಗೆ ಫೋನ್ ಮಾಡಿ ಜ್ಯೋತಿಯವರಿಗೆ ನೀಡಿದ್ದಾರೆ. ಆಗ ಬಸ ವೇಶ್ ಜ್ಯೋತಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿ ದ್ದಾರೆ ಎನ್ನಲಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಘಟನೆ ಬಗ್ಗೆ ಆಘಾತಗೊಂಡಿದ್ದ ಜ್ಯೋತಿ ಮಂಗಳವಾರ ಭದ್ರಾವತಿಯ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ದೂರಿನಲ್ಲಿ ಅನಾಮಧೇಯ ವ್ಯಕ್ತಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದ ರಿಕೆ ಹಾಕಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಕೇಸ್ ದಾಖಲಾದ ಬಳಿಕ ಮಾತನಾಡಿದ ಅಧಿಕಾರಿ ಜ್ಯೋತಿ, ಅಂದು ರಾತ್ರಿ ರೇಡ್ ನಡೆದಾಗ ನಮ್ಮ ಮೇಲೆ ದಾಳಿ ಮಾಡುವ ಸನ್ನಿವೇಶ ಎದುರಾಗಿತ್ತು. ಕೆಲ ವರು ನಮ್ಮನ್ನು ನಿಂದಿಸಿದರು, ಆ ನಂತರ ಫೋನ್ ಕಾಲ್‌ನಲ್ಲಿ ಬೆದರಿಸಿದರು. ಈ ವಿಚಾರವಾಗಿ ದೂರು ನೀಡಿದ್ದೇನೆ. ಮೊಬೈಲ್ ಕಾಲ್‌ನಲ್ಲಿ ಇರುವ ಸ್ವರ ಯಾರದ್ದು ಎಂಬುದು ಗೊತ್ತಿಲ್ಲ. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಮಹಿಳಾ ಅಧಿಕಾರಿಯಾಗಿರುವ ಜ್ಯೋತಿಗೆ ರಾಜಕೀಯ ಒತ್ತಡ ಹೇರಲಾ ಗಿದೆಯಾ ಎಂಬ ಅನುಮಾನ ಕೂಡಾ ಮೂಡತೊಡಗಿದೆ. ರಾಜಕೀಯ ವ್ಯವಸ್ಥೆ ಯನ್ನು ಎದುರು ಹಾಕಿಕೊಂಡು ಕರ್ತವ್ಯ ನಿರ್ವಹಿಸುವುದು ಭದ್ರಾವತಿಯಲ್ಲಿ ಕಷ್ಟಸಾಧ್ಯ ಎಂಬುದಕ್ಕೆ ಜ್ಯೋತಿ ನೀಡಿರುವ ದೂರು ಸಾಕ್ಷಿಯಾಗಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ.
ಮೂವರ ಬಂಧನ: ಪ್ರಕರಣದ ಸಂಬಂಧ ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ನಿವಾಸಿ ರವಿ (೩೮) ಬಿನ್ ಮಲ್ಲೇಶಪ್ಪ, ಹಾಸನ ಜಿಲ್ಲೆಯ ಅರಕಲಗೂಡಿನ ನಿವಾ ಸದ ವರುಣ್ (೩೪) ಬಿನ್ ರಾಜಶೇಖರ್, ಸುರೇಂದ್ರಗೌಡ ಕ್ಯಾಂಪ್‌ನ ಅಜಯ್ (೨೮) ಬಿನ್ ತಿಪ್ಪೇಶ್ ಎಂಬುವವರನ್ನು ಭದ್ರಾವತಿ ಹಳೇನಗರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ೬ ರಿಂದ ೭ ಜನರ ಹೆಸರು ನಮೂದಿಸಲಾಗಿದ್ದು ಉಳಿದವರ ಬಂಧನಕ್ಕೆ ಖಾಕಿ ಪಡೆ ಬಲೆ ಬೀಸಿದೆ.

Previous articleಅಯೋಧ್ಯೆ ರಾಮಮಂದಿರ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ಇನ್ನಿಲ್ಲ
Next articleಪ್ರಧಾನಿ‌ ಮೋದಿ ನಡೆ ಬಗ್ಗೆ ಎಐಸಿಸಿ ಅಧ್ಯಕ್ಷ ಖರ್ಗೆ ಆಕ್ಷೇಪ