ಭಕ್ತಸಾಗರದ ಮಧ್ಯೆ ಕುಮಾರೇಶ್ವರರ ರಥೋತ್ಸವ

ನರೇಗಲ್ಲ: ಸಹಸ್ರಾರು ಭಕ್ತರ ಮಧ್ಯೆ ಹಾನಗಲ್ಲ ಗುರು ಕುಮಾರೇಶ್ವರರ ಮಹಾರಥೋತ್ಸವವು ಅತ್ಯಂತ ಸಡಗರ, ಸಂಭ್ರಮದಿಂದ ಜರುಗಿತು.
ಕಳೆದ ಆರು ದಿನಗಳಿಂದ ಶ್ರೀಮಠವು ವೈಶಿಷ್ಟ್ಯಪೂರ್ಣ ಪುಣ್ಯ ಸ್ಮರಣೋತ್ಸವ ಹಾಗೂ ನುಡಿಹಬ್ಬ ಆಚರಿಸಿದ್ದ ಹಿನ್ನಲೆ ಈ ವರ್ಷ ಶ್ರೀಮಠ ಜನಸಾಗರದಿಂದ ತುಂಬಿ ತುಳುಕುತ್ತಿತ್ತು. ಹರಗುರು ಚರ ಮೂರ್ತಿಗಳು ಮಹಾರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಹಾನಗಲ್ಲ ಕುಮಾರೇಶ್ವರರ ಮಹಾರಾಜ ಕೀ ಜೈ ಎಂಬ ಜೈ ಘೋಷಗಳು ಕೇಳಿಬಂದವು, ಸುತ್ತಮುತ್ತಲ ಪ್ರದೇಶಗಳಾದ ಅಬ್ಬಿಗೇರಿ, ರೋಣ, ಕೊತಬಾಳ, ಸೂಡಿ, ನಿಡಗುಂದಿ, ಜಕ್ಕಲಿ, ಹಾಲಕೆರೆ, ನಿಡಗುಂದಿ, ಯಲಬುರ್ಗಾ, ಕುಕನೂರ, ಕೊಪ್ಪಳ, ಗದಗ, ಮುಂಡರಗಿ ಯನ್ನೊಳಗೊಂಡಂತೆ ನಾಡಿನ ವಿವಿದ ಮೂಲೆಯಿಂದ ಜನಸಾಗರ ಹರಿದುಬಂದಿತ್ತು, ಜನಸಾಗರದ ಮಧ್ಯೆ ವಾಹನಗಳ ಭರಾಟೆ ಹೆಚ್ಚಾಗಿತ್ತು.
ಯಲಬುರ್ಗಾ ತಾಲೂಕಿನ ಬಿನ್ನಾಳ ಗ್ರಾಮದ ಸದ್ಭಕ್ತರು ತೇರಿನ ಕಳಸದೊಂದಿಗೆ ಭಜನೆ, ಡೂಳ್ಳು, ಕಹಳೆ ಹಾಗೂ ವಿವಿಧ ವಾದ್ಯ ಮೇಳಗಳೊಂದಿಗೆ ಆಗಮಿಸಿದರೆ, ಮುಧೋಳ ಗ್ರಾಮದ ಸದ್ಭಕ್ತರು ಪಾಲಕಿ ಹಾಗೂ ನಂದಿಕೋಲಿನೊಂದಿಗೆ ಆಗಮಿಸಿದ್ದರು, ಮಾರನಬಸರಿ ಗ್ರಾಮದ ಸದ್ಭಕ್ತರು ಸಕಲ ವಾದ್ಯಮೇಳಗಳೊಂದಿಗೆ ತೇರಿನ ಹಗ್ಗದೊಂದಿಗೆ ಆಗಮಿಸಿದರೆ ನಿಡಗುಂದಿ ಗ್ರಾಮದ ಸದ್ಭಕ್ತರು ಕುಮಾರೇಶ್ವರರ ಭಾವಚಿತ್ರ ಮೆರವಣಿಗೆಯೊಂದಿಗೆ ಆಗಮಿಸುವ ಮೂಲಕ ರಥೋತ್ಸವದಲ್ಲಿ ಭಾಗಿಯಾಗಿದ್ದರು. ಎಲ್ಲ ಗ್ರಾಮಗಳಿಂದ ಆಗಮಿಸುವ ಭಕ್ತರ ಮಾಹಾಸಂಗಮದ ವೇಳೆ ಮಠದ ಪ್ರಾಂಗಣದಲ್ಲಿ ವಿವಿಧ ವಾದ್ಯಮೇಳಗಳು ಝೇಂಕರಿಸಿದವು. ನೆರೆದ ಭಕ್ತರ ಸಮೂಹ ಹಾನಗಲ್ಲ ಕುಮಾರೇಶ್ವರರಿಗೆ ಜಯವಾಗಲಿ, ಹರಹರ ಮಹಾದೇವ ಎಂಬ ಜಯಘೋಷಣೆಗಳು ಮುಗಿಲು ಮುಟ್ಟುವಂತೆ ಕೇಳುತ್ತಿತ್ತು. ಸಕಲ ವಾದ್ಯ ಮೇಳದೊಂದಿಗೆ ತೇರು ಪಾದಗಟ್ಟಿವರೆಗೆ ತಲುಪಿ ಮರಳಿ ಮೂಲ ಸ್ಥಳಕ್ಕೆ ಬಂದು ತಲುಪಿತು. ರಥೋತ್ಸವದಲ್ಲಿ ವಿವಿಧ ಭಾಗಗಳಿಂದ ಸಹಸ್ರಾರು ಸಂಖೆಯಲ್ಲಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಜಾತ್ರಾಮಹೋತ್ಸವದ ಅಂಗವಾಗಿ ಶುಕ್ರವಾರ ಬೆಳಗ್ಗೆ ೬ ಗಂಟೆಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ಕಂಕೈರ್ಯಗಳು ಜರುಗಿದವು.