ಬೆಂಗಳೂರು: ಮುಡಾ ನಿವೇಶನ ಹಗರಣದ ದೂರಿನ ಸಂಬಂಧ ರಾಜ್ಯಪಾಲರು ತಮ್ಮ ಸಂವಿಧಾನದತ್ತ ಅಧಿಕಾರ ಚಲಾಯಿಸಿ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಂಡತನ ಬಿಟ್ಟು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ `ಎಕ್ಸ್’ನಲ್ಲಿ ವಿಜಯೇಂದ್ರ ಪೋಸ್ಟ್ ಮಾಡಿದ್ದಾರೆ. “ಗೌರವಾನ್ವಿತ ರಾಜ್ಯಪಾಲರು ತಮ್ಮ ಸಂವಿಧಾನ ದತ್ತ ಅಧಿಕಾರ ಚಲಾಯಿಸಿ ಮುಖ್ಯಮಂತ್ರಿಗಳ ಮುಡಾ ಹಗರಣದ ದೂರಿಗೆ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಿದ್ದಾರೆ. ಸಾಕಷ್ಟು ದಾಖಲೆ, ಪುರಾವೆಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ಭ್ರಷ್ಟ ಹಗರಣಗಳ ವಿರುದ್ಧ ಹಾಗೂ ಮುಖ್ಯಮಂತ್ರಿಗಳ ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದರ ವಿರುದ್ಧ ಎಷ್ಟೇ ಹೋರಾಟ ನಡೆಸಿದರೂ ತಮ್ಮನ್ನು ಜಗ್ಗಿಸುವವರಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಂಡತನ ಪ್ರದರ್ಶಿಸುತ್ತಿದ್ದರು. ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯಲು ಅನುವಾಗುವಂತೆ ಈಗಲಾದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಮುಖ್ಯಮಂತ್ರಿ ಸ್ಥಾನದ ಘನತೆ ಉಳಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.
                























