ಬಾಗಲಕೋಟೆ(ಇಳಕಲ್): ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್ ಪಕ್ಷದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು ಅದು ಭಾರತೀಯ ಜನತಾ ಪಕ್ಷ ಆಗದೇ ಬ್ರಿಟಿಷರ ಜನತಾ ಪಕ್ಷ ಆಗಿದೆ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಆರೋಪಿಸಿದರು.
ನಗರದ ಕಂಠಿ ಸರ್ಕಲ್‌ನಲ್ಲಿ ನಿರ್ಮಿಸಿದ ಬೃಹತ್ ವೇದಿಕೆಯಲ್ಲಿ ಮಹಾತ್ಮಾ ಗಾಂಧಿ ಮತ್ತು ಲಾಲಬಹಾದ್ದೂರ ಶಾಸ್ತ್ರಿಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜಾತ್ಯತೀತ ದೇಶದಲ್ಲಿ ಅಶಾಂತಿ ಹಿಂಸೆಯ ವಾತಾವರಣ ಮೂಡಿಸುವ ದುಷ್ಟ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳರ ಬಾಯಿಯಂತೂ ವಿನಾಕಾರಣ ಬೇರೆಯವರನ್ನು ಬೈಯಲೆಂದೇ ಇಡಲಾಗಿದೆ. ಬಿಜೆಪಿಯ ಗೂಂಡಾಗಿರಿ ದಾದಾಗಿರಿಯನ್ನು ಹತ್ತಿಕ್ಕುವುದೇ ನಮ್ಮ ಕೆಲಸವಾಗಲಿದೆ ಎಂದು ಬಿಸಿ ಮುಟ್ಟಿಸಿದರು.