ಬ್ಯಾಂಕ್ ದರೋಡೆ ತನಿಖೆ ಚುರುಕು; ಎಸೆದಿದ್ದ ಮೊಬೈಲ್ ಪತ್ತೆ

0
19

ಮಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಕೆ.ಸಿ. ರೋಡ್ ಶಾಖೆಯಲ್ಲಿ ಜ. ೧೭ರಂದು ಹಾಡುಹಗಲೇ ನಡೆದ ದರೋಡೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ದರೋಡೆಕೋರರು ಪೊಲೀಸ್ ತನಿಖೆಯ ದಿಕ್ಕು ತಪ್ಪಿಸಲು ಯೋಜಿಸಿದ ವಿಚಾರ ಬೆಳಕಿಗೆ ಬಂದಿದೆ.
ದರೋಡೆಕೋರರು ಪೊಲೀಸರನ್ನು ಗೊಂದಲಗೊಳಿಸಲು ಎರಡು ಒಂದೇ ರೀತಿಯ ಕಾರಿನಲ್ಲಿ ಬಂದಿದ್ದರು. ಹೆದ್ದಾರಿ ತಲುಪುತ್ತಿದ್ದಂತೆಯೇ ಒಂದು ಕಾರು ಮಂಗಳೂರಿನ ಕಡೆ ತೆರಳಿದ್ದರೆ, ಇನ್ನೊಂದು ಕಾರು ಕೇರಳ ಕಡೆ ಪರಾರಿಯಾಗಿದೆ. ಹೀಗೆ ಎರಡು ಕಾರುಗಳಲ್ಲಿ ದರೋಡೆಕೋರರು ಪ್ರತ್ಯೇಕಗೊಂಡಿದ್ದಾರೆ. ಅಷ್ಟೇ ಅಲ್ಲದೆ, ಕೃತ್ಯ ಎಸಗುವ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಯ ಮೊಬೈಲ್ ಫೋನನ್ನೂ ದರೋಡೆಕೋರರು ಕಿತ್ತುಕೊಂಡು ಹೋಗಿದ್ದಾರೆ. ದರೋಡೆಕೋರರ ಒಂದು ತಂಡ ಮಂಗಳೂರು ನಗರದ ಕಡೆಗೆ ಬಂದು ಮೊಬೈಲ್ ಎಸೆದು ಪರಾರಿಯಾಗಿದೆ. ದರೋಡೆಕೋರರು ಮಂಗಳೂರು-ಉಡುಪಿ ಗಡಿ ಪ್ರದೇಶವಾದ ಹೆಜಮಾಡಿ ಬಳಿ ಮೊಬೈಲ್ ಎಸೆದು ಹೋಗಿದ್ದಾರೆ. ಸದ್ಯ ಹೆಜಮಾಡಿ ಬಳಿ ಆ ಮೊಬೈಲ್ ಪತ್ತೆಯಾಗಿದೆ. ತನಿಖೆಗಾಗಿ ಪೊಲೀಸರ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ದರೋಡೆ ಬಳಕೆಯಾದ ಒಂದು ಕಾರು ತಲಪಾಡಿ ಟೋಲ್ ದಾಟುವ ದೃಶ್ಯ ಪತ್ತೆಯಾಗಿದೆ. ಕಾರಿನಲ್ಲಿ ಒಬ್ಬನೇ ಇರುವುದು ಗೋಚರಿಸಿದೆ.

೬ ಕೋಟಿ ಚಿನ್ನ ಬಿಟ್ಟರು..
ಪ್ರಕರಣದಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ. ದರೋಡೆಕೋರರರು ಎಷ್ಟು ಸಾಧ್ಯವೋ ಅಷ್ಟು ಬೇಗ ಎಲ್ಲವನ್ನು ದೋಚಿ ಓಡಿಹೋಗುವ ಆತುರದಲ್ಲಿ ಸುಮಾರು ೬ ಕೋಟಿ ರೂಪಾಯಿ ಮೌಲ್ಯದಷ್ಟು ಚಿನ್ನವನ್ನು ಬಿಟ್ಟು ಹೋಗಿದ್ದಾರೆ. ಸುಮಾರು ೧೨ಕೆಜಿಯಷ್ಟು ಚಿನ್ನವನ್ನು ಬ್ಯಾಂಕ್‌ನಲ್ಲಿಯೇ ಬಿಟ್ಟಿದ್ದಾರೆ. ಆರು ನಿಮಿಷದ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನೂ ಗೋಣಿಯಲ್ಲಿ ಹಾಕಿ ದೋಚಿಕೊಂಡು ಹೋಗಿದ್ದಾರೆ. ಪೊಲೀಸರಿಗೆ ಸಮಯ ಕೊಡಬಾರದು ಹಾಗೂ ಹೋಗಲು ಭಾರವಾಗುತ್ತೆ ಎಂಬ ಕಾರಣದಿಂದ ಬಿಟ್ಟು ಹೋಗಿರುವ ಶಂಕೆಯಿದೆ.

ಮೌಲ್ಯದ ಬಗ್ಗೆ ಗೊಂದಲ..
ಆರಂಭಿಕ ಮಾಹಿತಿಯಲ್ಲಿ ಬ್ಯಾಂಕ್‌ನಿಂದ ಸುಮಾರು ೧೮ ಕೋಟಿ ಮೌಲ್ಯದ ನಗ, ನಗದು ದರೋಡೆಯಾಗಿದೆ ಎನ್ನಲಾಗಿತ್ತು. ನಂತರ ಮಂಗಳೂರು ಪೊಲೀಸರು ಹೊರಡಿಸಿದ ಪತ್ರಿಕಾ ಪ್ರಕಟನೆಯಲ್ಲಿ ಸುಮಾರು ೧೦ರಿಂದ ೧೨ ಕೋಟಿ ಎಂದು ತಿಳಿಸಲಾಗಿತ್ತು, ರಾತ್ರಿ ಹೊರಡಿಸಿದ ಪ್ರಕಟನೆಯಲ್ಲಿ ೪ ಕೋಟಿ ಎಂದು ಹೇಳಲಾಗಿದೆ. ವಾಸ್ತವದಲ್ಲಿ ದರೋಡೆಯಾದ ನಗ-ನಗದಿನ ನಿಖರ ಮೌಲ್ಯ ಇನ್ನೂ ತಿಳಿದು ಬಂದಿಲ್ಲ.

ಆತಂಕ ಬೇಡ…
ದರೋಡೆಕೋರರು ೧೧ ಲಕ್ಷ ಹಣ, ಬ್ಯಾಂಕ್‌ನ ಬಹುಪಾಲು ಚಿನ್ನ ದೋಚಿದ್ದಾರೆ, ಆದರೆ ಗ್ರಾಹಕರು ಆತಂಕ ಪಡಬೇಕಿಲ್ಲ ೧೯ ಕೋಟಿ ರೂ. ವಿಮೆ ಇದೆ ಎಂದು ಕೋಟೆಕಾರ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೃಷ್ಣ ಶೆಟ್ಟಿ ಹೇಳಿದ್ದಾರೆ.
ಗ್ರಾಹಕರ ಹಣ, ಚಿನ್ನಕ್ಕೆ ಏನೂ ಆಗುವುದಿಲ್ಲ. ಗ್ರಾಹಕರಿಗೆ ಅವರ ಹಣ ಸಿಗಲಿದೆ. ಬ್ಯಾಂಕ್‌ನಲ್ಲಿ ಸಿಸಿ ಕ್ಯಾಮೆರಾ ವ್ಯವಸ್ಥೆ ಇದೆ. ಒಂದು ಕ್ಯಾಮೆರಾ ಸರಿಯಾಗಿ ಕೆಲಸ ಮಾಡದ ಕಾರಣ ಸರಿಪಡಿಸಲು ಎಲ್ಲಾ ಕ್ಯಾಮೆರಾ ಆಫ್ ಮಾಡಲಾಗಿತ್ತು. ಬ್ಯಾಂಕ್ ಸೈರನ್ ಸರಿ ಇದೆ. ಆದರೆ ರಾತ್ರಿ ಮಾತ್ರ ಕೆಲಸ ಮಾಡುತ್ತದೆ. ಹಗಲು ಹೊತ್ತಿನಲ್ಲಿ ಸೈರನ್ ಆಫ್ ಆಗಿರುತ್ತದೆ. ರಾತ್ರಿ ಭದ್ರತಾ ಸಿಬಂದಿ ಇದ್ದಾರೆ. ಹಗಲು ವೇಳೆಯಲ್ಲಿ ಇಲ್ಲ. ಮುಂದೆ ದಿನದ ೨೪ ತಾಸು ಭದ್ರತೆಯ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.

Previous articleಮಗನಿಗೆ ಗುರಿ ಇಟ್ಟ ಕೋವಿಗೆ ಪತ್ನಿ ಬಲಿ, ಪತಿ ಆತ್ಮಹತ್ಯೆ
Next articleಬಿಜೆಪಿ ಹಿಂದುತ್ವದ ಹೆಸರಲ್ಲಿ ಹಣ ಮಾಡುತ್ತಿದೆ