ಬೆಳ್ತಂಗಡಿ: ನಸುಕಿನ ಜಾವ ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮಂಗಳಾದೇವಿ ಮೇಳದ ಯಕ್ಷಗಾನ ಭಾಗವತ ಸತೀಶ್ ಆಚಾರ್ಯ(40) ಮೃತಪಟ್ಟಿದ್ದಾರೆ.
ಅಂಡಿಂಜೆ ಗ್ರಾಮದ ಪಿಯೂಲಿರು ಮನೆ ನಿವಾಸಿ ದಿ| ಅಣ್ಣಿ ಆಚಾರ್ಯ ಮತ್ತು ವಿನೋದ ಆಚಾರ್ಯ ದಂಪತಿ ಪುತ್ರ, ಮಂಗಳಾದೇವಿ ಯಕ್ಷಗಾನ ಮೇಳದ ಯಕ್ಷಗಾನ ಭಾಗವತ ಸತೀಶ್ ಆಚಾರ್ಯ ಅಂಡಿಂಜೆ ಮೃತಪಟ್ಟವರು.
ಸುಳ್ಯದಲ್ಲಿ ಭಾನುವಾರ ನಡೆದ ಯಕ್ಷಗಾನ ಮುಗಿಸಿ ಮುಂಜಾನೆ 4 ಗಂಟೆಗೆ ತಮ್ಮ ಬೈಕ್‌ನಲ್ಲಿ ಅಂಡಿಂಜೆಗೆ ಬರುತ್ತಿರುವ ಸಂದರ್ಭದಲ್ಲಿ ಅಂಡಿಂಜೆ ಕಿಲಾರ ಮಾರಿಗುಡಿ ದೇವಸ್ಥಾನದ ಸಮೀಪದ ತಿರುವಿನಲ್ಲಿ ಅಪಘಾತ ನಡೆದಿದ್ದು, ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತರಾಗಿದ್ದಾರೆ. ಅಪಘಾತದಲ್ಲಿ ಎದುರಿನಿಂದ ಬರುತ್ತಿದ್ದ ಮತ್ತೊಬ್ಬ ಬೈಕ್ ಸವಾರ ಕೂಡ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.