ಬೆಳಗಾವಿ: ನಬಾರ್ಡ್ ಗ್ರಾಮೀಣ ಮೂಲಭೂತ ಅಭಿವೃದ್ಧಿ ಅನುದಾನ 2024-25(RIDF 2024-25) ಯೋಜನೆಯಡಿ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ರೂ. 9.025 ಕೋಟಿ ಮೌಲ್ಯದ 2240 ಎಮ್.ಟಿ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ಘಟಕ ಸ್ಥಾಪನೆಗೆ ನಬಾರ್ಡ್ ಅನುಮತಿ ದೊರೆತಿದೆ ಎಂದು ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಇಲ್ಲಿಯವರೆಗೆ ರೈತರು ಬೆಳೆದ ಉತ್ಪನ್ನದ ಸುಮಾರು 25-30 % ರಷ್ಟು ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳು ಕೋಲ್ಡ್ ಸ್ಟೋರೇಜ್ ಸೌಲಭ್ಯವಿಲ್ಲದ ಕಾರಣ ಹಾಳಾಗುತ್ತಿದ್ದವು, ಹೀಗಾಗಿ ರೈತರು ಅಧಿಕವಾಗಿ ಬರುವಂತಹ ಲಾಭವನ್ನು ಕಳೆದುಕೊಳ್ಳಬೇಕಾಗುತ್ತಿತ್ತು, ಇದನ್ನು ತಡೆಯಲು ರೈತರು ಬೇಕಾಬಿಟ್ಟಿಯಾದ ಬೆಲೆಯಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬೇಕಾದ ಪ್ರಸಂಗ ಎದುರಾಗುತ್ತಿತ್ತು.
ನೂತನ ಕೋಲ್ಡ್ ಸ್ಟೋರೇಜ್ ಸ್ಥಾಪನೆಯಿಂದ ಜಿಲ್ಲೆಯ ಮತ್ತು ಸುತ್ತಮುತ್ತಲಿನ ರೈತರಿಗೆ ತುಂಬಾ ಸಹಾಯಕವಾಗಲಿದ್ದು ಇಲ್ಲಿ ಹೇರಳವಾಗಿ ಬೆಳೆಯಲಾಗುವ ಆಲೂಗಡ್ಡೆ, ಮೆಣಸಿನಕಾಯಿ, ಕಾಯಿಪಲ್ಯ, ದ್ವಿದಳ ಧಾನ್ಯ, ಹಣ್ಣು ಮತ್ತು ಇತ್ಯಾದಿ ಬೆಳೆಗಳನ್ನು ಅನೇಕ ದಿನಗಳವರೆಗೆ ಜಿಲ್ಲೆಯ ರೈತ ಸಮುದಾಯ ಶೇಖರಿಸಿ ಇಡಬಹುದಾಗಿದೆ ಮತ್ತು ಹೀಗೆ ಇಡುವುದರಿಂದ ಇದರ ಗುಣಮಟ್ಟ, ತಾಜಾತನ ಹಾಗೂ ಪೌಷ್ಟಿಕಾಂಶ ಮೌಲ್ಯವನ್ನು ಹೆಚ್ಚಿನ ಕಾಲದವರೆಗೆ ಕಾಪಾಡುವ ನಿಟ್ಟಿನಲ್ಲಿ ಖಂಡಿತವಾಗಿಯೂ ಇಲ್ಲಿನ ರೈತರಿಗೆ ಅನುಕೂಲಕರವಾಗಲಿದೆ.
ಕೆಲವು ತಿಂಗಳ ಹಿಂದೆ ನಡೆದ ಬ್ಯಾಂಕರ್ಸ್ DLCC ಸಭೆಯಲ್ಲಿ ಜಿಲ್ಲಾ ನಬಾರ್ಡ್ ಅಧಿಕಾರಿಗಳಿಗೆ ಬೆಳಗಾವಿಯಲ್ಲಿ ರೈತರಿಗೆ ಅನುಕೂಲವಾಗಲು ಕೋಲ್ಡ್ ಸ್ಟೋರೇಜ್ ಘಟಕ ಸ್ಥಾಪನೆಯ ಬಗ್ಗೆ ವಿಷಯ ಅವಲೋಕಿಸಲು ಸೂಚನೆ ನೀಡಲಾಗಿತ್ತು ಎಂದಿದ್ದಾರೆ.