ಬೆಳಗಾವಿಯಲ್ಲಿ ಶಿವಾಜಿ ಜಯಂತಿಯ ವೈಭವಯುತ ಮೆರವಣಿಗೆ

ಬೆಳಗಾವಿ: ಬೋಲೋ ಛತ್ರಪತಿ ಶಿವಾಜಿ ಮಹಾರಾಜ ಕೀ ಜೈ…. ಜೈ ಭವಾನಿ, ಜೈ ಶಿವಾಜಿ.. ಹೀಗೆ ಮುಗಿಲು ಮುಟ್ಟುವಂತೆ ಕೇಳಿ ಬರುತ್ತಿದ್ದ ಘೋಷಣೆಗಳು. ಕಿವಿಗಡಚಿಕ್ಕುವ ಕರತಾಡನ. ಶಿವಾಜಿ ಮಹಾರಾಜರ ಭವ್ಯ ಪಲ್ಲಕಿಗೆ ಪೂಜೆ ನೆರವೇರಿಸುವ ಮೂಲಕ ಗುರುವಾರ ಶಿವಾಜಿ ಜಯಂತಿಯ ಅಂಗವಾಗಿ ಶಿವಾಜಿ ಮಹಾರಾಜರ ವೈಭವಯುತ ರೂಪಕಗಳ ಭವ್ಯ ಮೆರವಣಿಗೆಗೆ ಇಲ್ಲಿನ ನರಗುಂದಕರ ಬಾವೆ ಚೌಕದಲ್ಲಿ ಚಾಲನೆ ನೀಡಲಾಯಿತು.
ಬಣ್ಣಬಣ್ಣದ ಹೂಗಳಿಂದ ಶೃಂಗಾರಗೊಂಡಿದ್ದ ಶಿವಾಜಿ ಮಹಾರಾಜರ ಭವ್ಯ ಪಲ್ಲಕಿಗೆ ಮೇಯರ್ ಮಂಗೇಶ ಪವಾರ್, ಉಪ ಮೇಯರ್ ವಾಣಿ ವಿಲಾಸ ಜೋಶಿ ಪೂಜೆ ಮಾಡಿದರು. ನಂತರ ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಅನಿಲ ಬೆನಕೆ, ಶಿವಜಯಂತಿ ಮದ್ಯವರ್ತಿ ಸಮಿತಿಯ ಪ್ರಕಾಶ ಮರಗಾಳ, ಸರಿತಾ ಪಾಟೀಲ, ರೇಣು ಕಿಲ್ಲೇಕರ, ವಿಕಾಸ ಕಲಘಟಗಿ, ನಗರ ಪೊಲೀಸ್ ಆಯುಕ್ತ ಈಡಾ ಮಾರ್ಟಿನ್ ಅವರು ಆರತಿ ಎತ್ತುವ ಮೂಲಕ ಗೌರವ ಸಲ್ಲಿಸಿದರು.
ನಂತರ ಪಲ್ಲಕ್ಕಿಯನ್ನು ಹೊರುವ ಮೂಲಕ ಮೇಯರ್ ಮಂಗೇಶ ಪವಾರ್, ಉಪ ಮೇಯರ್ ವಾಣಿ ವಿಲಾಸ ಜೋಶಿ ಹಾಗೂ ಶಿವಜಯಂತಿ ಮದ್ಯವರ್ತಿ ಸಮಿತಿಯವರು ಧನ್ಯತಾಭಾವ ಅನುಭವಿಸಿದರು. ಇತಿಹಾಸದ ಪುಟಗಳಲ್ಲಿ ಅಮರನಾದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಬೆಳಗಾವಿಯಲ್ಲಿ ಈ ಬಾರಿ ಅಪೂರ್ವ ಶೌರ್ಯದ ಛಾಯೆಯಲ್ಲಿ, ಸಂಸ್ಕೃತಿ ಮತ್ತು ಸಮ್ಮಾನದಿಂದ ತುಂಬಿದ ಮೆರವಣಿಗೆಯು ವಿಶೇಷ ಗಮನ ಸೆಳೆಯಿತು. ಶಿವಾಜಿ ಜಯಂತಿ ಕನ್ನಡ-ಮರಾಠಿ ಸಹಭಾವನೆಯ ಸಂಕೇತವಾಗಿದೆ. ಬೆಳಗಾವಿಯಲ್ಲಿ ಈ ಹಬ್ಬವು ವೈಚಾರಿಕ ಏಕತೆ ಮತ್ತು ಶಕ್ತಿಯ ಪ್ರತೀಕವಾಗಿದೆ.