ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಅಮೃತ ಯೋಜನೆಯಲ್ಲಿ ನಡೆಯುತ್ತಿರುವ ಸಬ್ ಗುತ್ತಿಗೆದಾರರಿಂದ ಒಳಚರಂಡಿ ಪೈಪ್ ಲೈನ್ ಕಾಮಗಾರಿಗೆ ಆಗಮಿಸಿದ್ದ ಮೂಡಲಗಿ ತಾಲೂಕಿನ ಇಬ್ಬರೂ ಕಾರ್ಮಿಕರು ಮಣ್ಣು ಕುಸಿದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬುಧವಾರ ನಡೆದಿದೆ.
ಮೂಡಲಗಿ ತಾಲೂಕಿನ ಪಟಗೊಂದಿ ಗ್ರಾಮದ ಶಿವಲಿಂಗ ಮಾರುತಿ ಸರವೆ (20) ಹಾಗೂ ಬಸವರಾಜ ಸರವೆ (38) ಮೃತಪಟ್ಟ ಕೂಲಿ ಕಾರ್ಮಿಕರು ಎಂದು ಗುರುತಿಸಲಾಗಿದೆ. ಒಳಚರಂಡಿ ಪೈಪ್ ಲೈನ್ ಕಾಮಗಾರಿಗೆ ಮಣ್ಣು ತೆಗೆಯುತ್ತಿದ್ದ ವೇಳೆ ಏಕಾಏಕಿ ಮಣ್ಣು ಕುಸಿತದಿಂದ ನೆಲಕ್ಕೆ ಕುಸಿದಿದ್ದನ್ನು ಕಂಡ ಸ್ಥಳೀಯರು ಮಣ್ಣಿನಲ್ಲಿ ಸಿಲುಕಿದ್ದ ಇಬ್ಬರೂ ಕಾರ್ಮಿಕರನ್ನು ಜೆಸಿಬಿ ಮೂಲಕ ಹೊರ ತೆಗೆಯುವ ಪ್ರಯತ್ನ ಮಾಡಿದರು.
ಮಣ್ಣು ಕುಸಿತದಿಂದ ಸ್ಥಳದಲ್ಲಿ ಜನಸ್ತೋಮ ಸೇರ ತೋಡಗಿತು. ಪೊಲೀಸರು ಜನರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿಸರು. ಒಂದೂವರೆ ಗಂಟೆಯ ಬಳಿಕ ಮಣ್ಣಿನಲ್ಲಿ ಸಿಲುಕಿದ್ದ ಕಾರ್ಮಿಕರ ಮೃತ ದೇಹವನ್ನು ತೆಗೆದು ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು. ಬಿಮ್ಸ್ ಆಸ್ಪತ್ರೆಯಲ್ಲಿ ಮೃತ ಕಾರ್ಮಿಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಗರದಲ್ಲಿ ಒಳಚರಂಡಿ ಹಾಗೂ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗೆ ಇಲ್ಲಿಯವರೆಗೂ ಜನರು ಬೇಸತ್ತಿದ್ದರೂ. ಈಗ ಕೂಲಿ ಮಾಡಲು ಬಂದ ಕಾರ್ಮಿಕರು ದಾರುಣವಾಗಿ ಮೃತಪಟ್ಟಿದ್ದಾರೆ. ಇವರ ಸಾವಿಗೆ ಗುತ್ತಿಗೆ ನೀಡಿದ ಪಾಲಿಕೆ ಹೊಣೆಯೋ, ಕಂಪನಿ ಹೊಣೆಯೋ ಅಥವಾ ಸಬ್ ಗುತ್ತಿಗೆದಾರ ಹೊಣೆಯೋ ಎಂಬುದು ಸ್ಪಷ್ಟಪಡಿಸಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.