ಬೆಂಗಳೂರು ಕಾಲ್ತುಳಿತ ಘಟನೆ: ತನಿಖೆ ನಡೆಯುತ್ತಿದೆ ಲೋಪದೋಷವಾಗಿದ್ದರೆ ಸತ್ಯಾಸತ್ಯತೆ ಹೊರಬರಲಿದೆ

ಸಂ.ಕ. ಸಮಾಚಾರ ಕಲಬುರಗಿ: ಯುವಕರ ಸಾವು ಯಾವುದೇ ಸರ್ಕಾರಕ್ಕೆ ಹೆಮ್ಮೆಯ ವಿಷಯವಲ್ಲ. ಬೆಂಗಳೂರಿನಲ್ಲಿ ನಡೆದ ಘಟನೆಯನ್ನು ಡಿಫೆಂಡ್ ಮಾಡುತ್ತಿಲ್ಲ. ಆರ್ ಸಿಬಿ, ಕೆಎಸ್ ಸಿಎ, ಹಾಗೂ ಬಿಸಿಸಿಐ ಪ್ಲಾನಿಂಗ್‌ನಲ್ಲಿ‌ ಲೋಪವಾಗಿದೆ. ಸರ್ಕಾರದ ಲೋಪ ಏನಾದರೂ ಆಗಿದ್ದರೆ ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಐವಾನ್ ಇ ಶಾಹಿ‌ ಅತಿಥಿ ಗೃಹದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಭದ್ರತೆಯ ದೃಷ್ಟಿಯಿಂದ ಸರ್ಕಾರ ವಿಕ್ಟರಿ ಪೆರೇಡ್‌ಗೆ ನಿರಾಕರಣೆ ಮಾಡಿತ್ತು. ಆದರೆ, ‌ಬಿಜೆಪಿಯವರು ಇದಕ್ಕೆ ತಕರಾರು ತೆಗೆದು ಟ್ವೀಟ್ ಮಾಡಿ, ನಂತರ ಡಿಲೀಟ್ ಮಾಡಿದ್ದಾರೆ. ಈಗ ಘಟನೆ ನಡೆದು‌ ಹೋಗಿದೆ. ಎಲ್ಲದರಲ್ಲೂ ರಾಜಕೀಯ ಮಾಡಬಾರದು, ಇದು ಸಮಯವಲ್ಲ. ಸರ್ಕಾರ ತನ್ನ ಜವಾಬ್ದಾರಿಯಿಂದ ಹಿಂದೆ ಸರಿದಿಲ್ಲ. ಸಾವಿಗೀಡಾದವರ ಮನೆಯವರಿಗೆ ಸಾಂತ್ವನ ಹೇಳಿದೆ. ಪರಿಹಾರ ಕೂಡಾ ಘೋಷಿಸಿದೆ. ಘಟನೆ ಕುರಿತಂತೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ. ಪೊಲೀಸ್ ಅಧಿಕಾರಗಳ ಸಸ್ಪೆಂಡ್ ಮಾಡಲಾಗಿದೆ ಎಂದರು.

ಗೃಹ ಸಚಿವರ ರಾಜೀನಾಮೆಗೆ ಬಿಜೆಪಿ ಒತ್ತಾಯಿಸುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲ ಘಟನೆಗಳಿಗೂ ಒಂದೇ ಮಾನದಂಡ ಅನ್ವಯ ಆಗಬೇಕು. ಪೆಹೆಲ್ಗಾಂನಲ್ಲಿ ಉಗ್ರರು ಜನರನ್ನು ಹತ್ಯೆ ಮಾಡಿ ಹೋಗಿದ್ದಾರೆ ಅವರು ಎಲ್ಲಿ ಹೋಗಿದ್ದಾರೆ. ಭಾರತದ ಒಳಗೆ ಇದ್ದಾರ ಅಥವಾ ಪಾಕಿಸ್ತಾನಕ್ಕೆ ಹೋಗಿದ್ದಾರ ಎನ್ನುವ ಮಾಹಿತಿ ಇಲ್ಲ. ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವರ, ವಿದೇಶಾಂಗ ಸಚಿವರ ರಾಜೀನಾಮೆಗೆ ಯಾರಾದರೂ ಒತ್ತಾಯಿಸಿದ್ದಾರೆಯೇ ? ಎಂದು ಪ್ರಶ್ನಿಸಿದರು.

ವಿಧಾನಸೌಧದ ಮುಂದೆ ಸರ್ಕಾರ ಕಾರ್ಯಕ್ರಮ ಆಯೋಜಿಸಿತ್ತು. ಅಲ್ಲಿ ಆಟಗಾರರಿಗೆ ಸನ್ಮಾನ ಮಾಡುವುದು ತಪ್ಪಾ?. ಅಂತಹ ಕಾರ್ಯಕ್ರಮ ನಡೆದಾಗ ಯಾರಾದರೂ ಬರುತ್ತಾರೆ ಆಟಗಾರರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಾರೆ. ಆದರೆ, ಆಟೋಗ್ರಾಫ್, ಫೋಟೋಗ್ರಾಫ್ ಹುಚ್ಚು ಇರುವುದು ಮೋದಿಗೆ ನಮಗಲ್ಲ ಎಂದು ತಿರುಗೇಟು ನೀಡಿದರು.

ಬಿಜೆಪಿ ನಾಯಕರ ರಾಜ್ಯಪಾಲರ ಭೇಟಿ: ಬಿಜೆಪಿಯವರು ರಾಜ್ಯಪಾಲರನ್ನು ಭೇಟಿ ಮಾಡುವುದರಲ್ಲಿ ವಿಶೇಷವೇನಿಲ್ಲ. ಕಲಬುರಗಿಯ ವಿಚಾರದಲ್ಲಿಯೂ ಕೂಡಾ ಅವರು ರಾಜ್ಯಪಾಲರನ್ನು ಭೇಟಿ ಮಾಡಿದ್ದರು. ಬೆಂಗಳೂರು ಕಾಲ್ತುಳಿತ ಘಟನೆಯನ್ನು ರಾಜಕೀಯಗೊಳಿಸುತ್ತಿದ್ದಾರೆ. ಸಿಎಂ ಮಸಾಲೆ ದೋಸೆ ತಿನ್ನಲು ಹೋಗಿದ್ದಾರೆ ಎನ್ನುತ್ತಾರೆ. ಬಿಜೆಪಿಯವರು ಎಲ್ಲದಕ್ಕೂ ಮಸಾಲೆ ಹಾಕುತ್ತಾರೆ. ಅವರಿಗೆ ಪ್ರೌಢಿಮೆ ಇಲ್ಲ ಆದರೆ ನಮಗಿದೆ ಎಂದರು.

ಬೆಳೆವಿಮೆ: ಕಳೆದ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ರೂ 341 ಕೋಟಿ ಬೆಳೆ ವಿಮೆ‌ಬಿಡುಗಡೆ ಮಾಡಲಾಗಿದೆ. ನಮ್ಮ ಸರ್ಕಾರ ಬಂದಮೇಲೆ ಹೆಚ್ಚಿನ‌ ಸಂಖ್ಯೆಯಲ್ಲಿ ಬೆಳೆ ವಿಮೆ ಮಾಡಿಸಲು ಒತ್ತು‌ ನೀಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರಕ್ಕೆ ಹೋಲಿಸಿದರೆ ಬೆಳೆ ವಿಮೆ ಮಾಡಿದ ರೈತರ ಸಂಖ್ಯೆ ಹೆಚ್ಚಿದೆ ಎಂದರು.

ಅಗತ್ಯಕ್ರಮ: ಜಿಲ್ಲೆಯಲ್ಲಿ ಮರುಳು ಕೊರತೆಯಾಗಿದೆ‌. ಸಧ್ಯ ದೊರಕುತ್ತಿರುವ ಮರುಳಿನ ಬೆಲೆ ಚಿನ್ನದ ಬೆಳೆಯಷ್ಟಾಗಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಸರ್ಕಾರ ಅಥವಾ ಖಾಸಗಿ ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಮರುಳು ದೊರಕಿಸಲಿಕೊಡಲು ಅಗತ್ಯ ಕ್ರಮವಹಿಸಲಾಗಿದೆ. ಏನಾದರೂ ಸಮಸ್ಯೆ ಇದ್ದರೆ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಸಚಿವರು ಹೇಳಿದರು.

ಡಿಎಪಿ ಕೊರತೆ: ಈ ಸಲ ಡಿಎಪಿ ಗೊಬ್ಬರ ತೊಂದರೆಯಾಗುವ ಸಾಧ್ಯತೆ ಇದೆ. ಯಾಕೆಂದರೆ ನಮ್ಮ ರಾಜ್ಯಕ್ಕೆ ಕೇವಲ 42% ಮಾತ್ರ ಆಮದಾಗಿದೆ. ನಮ್ಮ ಪಾಲಿನಲ್ಲಿಯೂ ಕೂಡಾ ಕೇಂದ್ರ ಬಿಹಾರ ರಾಜ್ಯಕ್ಕೆ ಕಳಿಸಿದೆ. ಅಗತ್ಯವಾಗಿ ಬೇಕಾಗುವ ರಸಗೊಬ್ಬರ ಸರಬರಾಜಿಗೆ ಸಂಬಂಧಿಸಿದಂತೆ ಕೃಷಿ ಸಚಿವರು ಕೇಂದ್ರದ‌ ಜೊತೆ ಮಾತನಾಡಿದ್ದಾರೆ ಎಂದರು.

ತನಿಖೆ: ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ಸಂಘದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ನೂತನ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಧಿಕಾರಿಗಳು ವರದಿ ಸಲ್ಲಿಸಲು ಕಾಲಾವಕಾಶ ಕೇಳಿದ್ದಾರೆ ಆದಷ್ಟು ಬೇಗ ವರದಿ ಬರಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.