ಬೆಂಗಳೂರಿನ ರಿಕಿ ಕೇಜ್‌ಗೆ ಮೂರನೇ ಬಾರಿ ಗ್ರ್ಯಾಮಿ ಪ್ರಶಸ್ತಿ

0
8

ಖ್ಯಾತ ಸಂಗೀತ ಸಂಯೋಜಕ ಬೆಂಗಳೂರಿನ ರಿಕಿ ಕೇಜ್ ಮೂರನೇ ಬಾರಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಡಿವೈನ್ ಟೈಡ್ಸ್ ಎಂಬ ಆಲ್ಬಂ ಬೆಸ್ಟ್‌ ಇಮ್ಮರ್ಸೀವ್‌ ಆಡಿಯೋ ಆಲ್ಬಂ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದು, ಇಂದು ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಗ್ರ್ಯಾಮಿ ಪ್ರಶಸ್ತಿಯನ್ನು ಮೂರನೇ ಬಾರಿ ಮುಡಿಗೇರಿಸಿಕೊಂಡಿದ್ದಾರೆ.
ಅವರು ಈ ಪ್ರಶಸ್ತಿಯನ್ನು ಸಾಂಪ್ರದಾಯಿಕ ಬ್ರಿಟಿಷ್ ರಾಕ್ ಬ್ಯಾಂಡ್ ದಿ ಪೊಲೀಸ್‌ನ ಡ್ರಮ್ಮರ್‌ ಸ್ಟೀವರ್ಟ್ ಕೋಪ್ಲ್ಯಾಂಡ್ ಅವರೊಂದಿಗೆ ಪ್ರಶಸ್ತಿ ಹಂಚಿಕೊಂಡಿದ್ದಾರೆ. ಇನ್ನು, ಈ ಸಾಧನೆಯೊಂದಿಗೆ, ರಿಕಿ ಕೇಜ್ ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದ ಏಕೈಕ ಭಾರತೀಯರು ಎನಿಸಿಕೊಂಡಿದ್ದಾರೆ. ಡಿವೈನ್ ಟೈಡ್ಸ್’ ಒಂಬತ್ತು ಹಾಡುಗಳ ಆಲ್ಬಂ ಆಗಿದ್ದು, ‘ಎಲ್ಲರಿಗೂ ಸಮಾನವಾಗಿ ಸೇವೆ ಸಲ್ಲಿಸುವ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಪ್ರತಿಯೊಬ್ಬರ ವೈಯಕ್ತಿಕ ಜೀವನವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ’ ಎಂಬ ಸಂದೇಶವನ್ನು ಸಾರುತ್ತದೆ.
ತಮ್ಮ ಮೂರನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದ ನಂತರ, ರಿಕಿ ಕೇಜ್ ಪ್ರಶಸ್ತಿ ಪುರಸ್ಕೃತರೊಂದಿಗೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು, ಈ ಬಗ್ಗೆ ಟ್ವೀಟ್‌ ಮಾಡಿದ ರಿಕಿ ಕೇಜ್‌, ಈಗಷ್ಟೇ ನನ್ನ 3ನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದೇನೆ. ಅತ್ಯಂತ ಕೃತಜ್ಞನಾಗಿದ್ದೇನೆ, ನಾನು ಮೂಕವಿಸ್ಮಿತನಾಗಿದ್ದೇನೆ! ನಾನು ಈ ಪ್ರಶಸ್ತಿಯನ್ನು ಭಾರತಕ್ಕೆ ಅರ್ಪಿಸುತ್ತೇನೆ ಎಂದೂ ರಿಕಿ ಕೇಜ್‌ ಬರೆದುಕೊಂಡಿದ್ದಾರೆ.

Previous articleಇವಿ ರಾಜಧಾನಿ ಕರ್ನಾಟಕ
Next articleಪ್ರತಿಪಕ್ಷಗಳ ಪ್ರತಿಭಟನೆ: ಲೋಕಸಭೆ, ರಾಜ್ಯಸಭೆ ಕಲಾಪ ಮುಂದೂಡಿಕೆ