ಮಂಜೇಶ್ವರ : ರಾತ್ರಿ ಹೊತ್ತು ಮನೆಯಲ್ಲಿ ಮಲಗಿದ ತಾಯಿಗೆ ಬೆಂಕಿ ಹಚ್ಚಿ ಆಕೆಯನ್ನು ಕೊಂದು ಬಳಿಕ, ನೆರೆಮನೆಯ ಮಹಿಳೆಯನ್ನು ಮನೆಗೆ ಕರೆಸಿ, ಆಕೆಗೂ ಬೆಂಕಿ ಹಚ್ಚಿದ ಘಟನೆ ನಡೆದಿದ್ದು ತಾಯಿ ಸಾವನ್ನಪ್ಪಿದ್ದಾರೆ ನೆರೆಮನೆಯ ಮಹಿಳೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ವರ್ಕಾಡಿ ನಲ್ಲಂಗಿ ನಿವಾಸಿ ದಿ.ಲೂಯಿಸ್ ಮೊಂತೇರೋರವರ ಪತ್ನಿ ಹಿಲ್ಡಾ (60) ಮೃತಪಟ್ಟ ಮಹಿಳೆ. ಪುತ್ರ ಮೇಲ್ವಿನ್ ಈ ಕೃತ್ಯವೆಸಗಿಧ್ಧಾನೆ. ನೆರೆಮನೆಯ ವಿಕ್ಟರ್ ರವರ ಪತ್ನಿ ಲೊಲಿಟಾ (30) ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜೂನ್ 26 ಗುರುವಾರ ಮುಂಜಾನೆ ಈ ಘಟನೆ ನಡೆದಿದ್ದು, ಪುತ್ರ ಮೇಲ್ವಿನ್ ಮೊಂತೇರೋ (33) ಈ ಕೃತ್ಯವೆಸಗಿ ಪರಾರಿಯಾಗಿದ್ದಾನೆ. ತಡರಾತ್ರಿ ತಾಯಿಗೆ ಬೆಂಕಿ ಹಚ್ಚಿದ ಬಳಿಕ, ನೆರೆಮನೆಯ ಮಹಿಳೆಯನ್ನು ತಾಯಿಗೆ ಹುಷಾರಿಲ್ಲವೆಂದು ಮನೆಗೆ ಕರೆದ ಬಳಿಕ ಆಕೆಗೂ ಬೆಂಕಿ ಹಚ್ಚಿದ್ದಾನೆ. ತಾಯಿ ಮೃತ ದೇಹ ಮನೆಯ ಹಿಂಭಾಗದ ಪೊದರುಗಳಡೆಯಲ್ಲಿ ದೊರೆತಿದೆ. ಮನೆಯಲ್ಲಿ ತಾಯಿ ಮತ್ತು ಮಗ ಮಾತ್ರವೇ ವಾಸಿಸುತ್ತಿದ್ದು, ಇನ್ನೋರ್ವ ಮಗ ಅಲ್ವಿನ್ ಮೊಂತೇರೋ ಕೊಲ್ಲಿ ರಾಷ್ಟ್ರದಲ್ಲಿದ್ದಾನೆ. ಆರೋಪಿ ಮೇಲ್ವಿನ್ ಕಟ್ಟಡ ಕಾರ್ಮಿಕನಾಗಿದ್ದಾನೆ.
ಆರೋಪಿ ಮೇಲ್ವಿನ್ ಬಂಧನ: ತಾಯಿಯನ್ನು ಕೊಂದ ಆರೋಪಿ ಮಗ ಸೆರೆಯಾಗಿದ್ದಾನೆ. ಸ್ವಂತ ಹೆತ್ತಬ್ಬೆಯನ್ನು ಕೊಂದು, ಸೋದರತ್ತೆಯನ್ನು ಕೊಲೆಗೆ ಯತ್ನಿಸಿ ಪರಾರಿಯಾದ ವರ್ಕಾಡಿ ನಲ್ಲೆಂಗಿ ನಿವಾಸಿ ಮೇಲ್ವಿನ್‌ನ್ನು ಮಂಜೇಶ್ವರ ಪೊಲೀಸರು ಕುಂದಾಪುರ ಕೊಲ್ಲೂರು ಸಮೀಪದಲ್ಲಿ ಸೆರೆ ಹಿಡಿದಿದ್ದಾರೆ. ಆರೋಪಿಯ ಮೊಬೈಲ್ ಲೊಕೇಶನ್ ಅನ್ನು ಹಿಡಿದುಕೊಂಡು ಬೆಂಬತ್ತಿದ ಮಂಜೇಶ್ವರ ಪೊಲಿಸರು ಘಟನೆ ನಡೆದ ಕೆಲ ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ.