ಮಂಗಳೂರು: ರಾಷ್ಟ್ರೀಯ ಬೀದಿಬದಿ ವ್ಯಾಪಾರಿಗಳ ದಿನಾಚರಣೆಯ ಅಂಗವಾಗಿ ನಗರದ ಪುರಭವನದ ಬಳಿ ಮಂಗಳವಾರ ಬೀದಿ ವ್ಯಾಪಾರಿಗಳ ಹಕ್ಕೊತ್ತಾಯ ಸಭೆಯನ್ನು ನಡೆಸಿದ ಸಂಘಟಕರ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜ. 21ರಂದು ಬೆಳಗ್ಗೆ 10ಕ್ಕೆ ಬೀದಿ ಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ನೇತೃತ್ವದಲ್ಲಿ ಹಕ್ಕೊತ್ತಾಯ ಸಭೆ ನಡೆಸುವುದಾಗಿ ಮಾಹಿತಿ ನೀಡಲಾಗಿತ್ತು. ಈ ವೇಳೆ ಬೀದಿ ಬದಿ ಶ್ರೇಯೋಭಿವೃದ್ಧಿ ಸಂಘದ ವತಿಯಿಂದ ಪುರಭವನದಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಬೀದಿಬದಿ ಹಕ್ಕೊತ್ತಾಯ ಸಭೆಯ ಸ್ಥಳ ಹಾಗೂ ಸಮಯವನ್ನು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಬದಲಾವಣೆ ಮಾಡುವಂತೆ ಇಮ್ತಿಯಾಜ್ ಗೆ ಪೊಲೀಸರು ನೋಟಿಸ್ ನೀಡಿದ್ದರು. ಆದರೂ ನೋಟಿಸ್‌ನಲ್ಲಿ ತಿಳಿಸಿದ ಅಂಶಗಳನ್ನು ಉಲ್ಲಂಘಿಸಿ ಬೀದಿ ಬದಿ ವ್ಯಾಪಾರಸ್ಥರ ಸಂಘದ ವತಿಯಿಂದ ಹಕ್ಕೊತ್ತಾಯ ಸಭೆ ನಡೆಸಲಾಗಿದೆ. ಅಲ್ಲದೆ ಅಕ್ರಮಕೂಟ ಕಟ್ಟಿಕೊಂಡು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡುವ ಉದ್ದೇಶದಿಂದ ಪುರಭವನದ ಬಳಿಯ ಕಾಲುದಾರಿಯಲ್ಲಿ ಗುಂಪು ಸೇರಿ ಕಮ್ಯುನಿಸ್ಟ್ ಪಕ್ಷದ ಬಾವುಟಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ನಾಗರಿಕರಿಗೆ ತೊಂದರೆಯುಂಟು ಮಾಡಿರುತ್ತಾರೆ ಎಂದು ಆರೋಪಿಸಿ ಪೊಲೀಸರು ಸಂಘದ ಗೌರವಾಧ್ಯಕ್ಷ ಇಮ್ತಿಯಾಜ್ ಮತ್ತಿತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.