ಬೆಳಗಾವಿ: ಬೀದಿ ನಾಯಿ ಕಚ್ಚಿದ್ದನ್ನು ನಿರ್ಲಕ್ಷ್ಯ ಮಾಡಿದ್ದ ಪರಿಣಾಮ ಯುವಕನೊಬ್ಬ ರ‍್ಯಾಬೀಸ್‌ಗೆ ಬಲಿಯಾದ ಘಟನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಮೃತ ಯುವಕನನ್ನು ಬೈಲಹೊಂಗಲ ತಾಲ್ಲೂಕಿನ ತಿಗಡಿ ಗ್ರಾಮದ ಶಿವಶಂಕರ ಬಸವಣೆಪ್ಪ ಪರಸಪ್ಪಗೋಳ (೩೦) ಎಂದು ಗುರುತಿಸಲಾಗಿದೆ. ಕೆಲ ತಿಂಗಳ ಹಿಂದೆ ಈತನಿಗೆ ಬೀದಿ ನಾಯಿ ಕಚ್ಚಿತ್ತು. ಆದರೆ ಗಂಭೀರ ಸ್ವರೂಪದ ಗಾಯಗಳಿಲ್ಲದ ಕಾರಣ ಗಂಭೀರವಾಗಿ ಪರಿಗಣಿಸದ ಪರಸಪ್ಪಗೋಳ ಚಿಕಿತ್ಸೆಯನ್ನು ಪಡೆಯದೆ ನಿರ್ಲಕ್ಷ್ಯ ಮಾಡಿದ್ದ ಎನ್ನಲಾಗಿದೆ.
ಆದರೆ ಕಳೆದೊಂದು ವಾರದಿಂದ ಯುವಕನಿಗೆ ವಿಪರೀತ ತಲೆನೋವು, ಗಂಟಲು ನೋವು, ದೇಹದಲ್ಲಿ ಸಂಕಟ ಶುರುವಾಗಿದೆ. ಗಂಟಲು ಒಣಗುವುದು ನೀರು ಕುಡಿಯಲು ಸಾಧ್ಯವಾಗದೆ ಇರುವುದು ಅನುಭವವಾದಾಗ ಮನೆಯವರು ಮಂಗಳವಾರ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಕರೆತಂದು ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ರಾತ್ರಿಯೇ ಸಾವನ್ನಪ್ಪಿದ್ದಾಗಿ ತಿಳಿದುಬಂದಿದೆ.
ಬೀದಿ ನಾಯಿ ಕಡಿತದಿಂದ ರ‍್ಯಾಬೀಸ್ ಆಗಿರಬಹುದು ಎಂದು ಶಂಕಿಸಲಾಗುತ್ತಿದ್ದು, ಸದ್ಯ ಮೃತನ ಮನೆಯವರನ್ನು ಕೂಡಾ ಪರೀಕ್ಷೆ ಮಾಡಲಾಗುತ್ತಿದೆ.