ಬಿಜೆಪಿ ಹೋರಾಟಕ್ಕೆ ಮಣಿದು ಆರೋಪಿಗಳ ಬಂಧನ

0
11

ಬೆಳಗಾವಿ: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಮೂವರನ್ನು ರಾಜ್ಯ ಸರ್ಕಾರ ಬಂಧಿಸಿದ್ದು ಸರ್ಕಾರಕ್ಕೆ ಈಗ ಬುದ್ದಿ ಬಂದಿದೆ. ದೇಶ ದ್ರೋಹಿಗಳನ್ನು ವಾರದ ನಂತರ ಬಂಧನ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದ ಹೊರಗೆ, ಒಳಗೆ ಬಿಜೆಪಿ ಹೋರಾಟಕ್ಕೆ ಮಣಿದು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರ ಹಿನ್ನೆಲೆ ಏನು, ಪಾಕ್ ಪರ ಘೋಷಣೆ ಕೂಗಲು ಪ್ರಚೋದನೆ ಕೊಟ್ಟಿದ್ದು ಯಾರು ಎಂಬುದನ್ನು ಜನರ ಮುಂದೆ ಹೇಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಎಫ್‌ಎಸ್‌ಎಲ್ ವರದಿ ಬಂದರೂ ಸರಕಾರ ಬಹಿರಂಗಪಡಿಸಿಲ್ಲ. ಖಾಸಗಿ ವರದಿ ಕಳೆದ ಮೂರು ದಿನಗಳಿಂದ ಓಡಾಡುತ್ತಿದೆ. ನಾಮಕೆವಾಸ್ತೆ ಬಂಧನ ಮಾಡದೇ ಕ್ರಮ ಕೈಗೊಳ್ಳಬೇಕು. ಅಮಾಯಕರು ಎಂದು ಸಚಿವರು, ಶಾಸಕರು ಒತ್ತಡ ತರಬಹುದು. ಆದರೆ ಸಿಎಂ ದಿಟ್ಟ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಸರ್ಕಾರದ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯಿಂದ ಸರ್ಕಾರ ಹೊರ ಬರಬೇಕು. ದೇಶದ್ರೋಹಿಗಳಿಗೆ ಕರ್ನಾಟಕದಲ್ಲಿ ಉತ್ತಮ ವಾತಾವರಣ ಇದೆ. ಕಾಂಗ್ರೆಸ್ ಸಚಿವರು, ಶಾಸಕರಿಗೆ ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ. ಸಿಎಂ ಮೇಲೆ ಯಾವುದೇ ಒತ್ತಡ ತರಬಾರದು. ದೇಶದ್ರೋಹಿಗಳ ಪರ ಹೇಳಿಕೆ ಕೊಟ್ಟ ಸಚಿವರಿಗೆ ದೇಶದ್ರೋಹಿಗಳು ಎಂದರು.
ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮಾ. ೫ರ ಬೆಳಿಗ್ಗೆ ಬೆಳಗಾವಿಗೆ ಬರುತ್ತಾರೆ. ಚಿಕ್ಕೋಡಿಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ಇದೆ. ಬಳಿಕ ಬೆಳಗಾವಿಯಲ್ಲಿ ಸಭೆ, ಪ್ರಬುದ್ಧರ ಜತೆಗೆ ಸಭೆ ನಡೆಸಲಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರ ಗೆಲ್ಲಲ್ಲು ಪ್ಲ್ಯಾನ್ ಮಾಡಲಾಗುತ್ತಿದೆ. ಅಭ್ಯರ್ಥಿ ಆಯ್ಕೆ ಕುರಿತು ದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದ್ದು ಮುಂದಿನ ದಿನಗಳಲ್ಲಿ ಈ ಬಗ್ಗೆ ಎಲ್ಲಾ ಹೇಳ್ತಿವಿ ಎಂದು ತಿಳಿಸಿದರು.

Previous articleಗ್ಯಾಸ್ ಸ್ಫೋಟ: ಗರ್ಭಿಣಿ ಸೇರಿ 7 ಜನರಿಗೆ ಗಾಯ
Next articleನೀವು ಸಚಿವರು; ಏನು ಮಾತನಾಡಬೇಕೆಂದು ತಿಳಿಯದೇ..?