ಬಿಜೆಪಿ ವರಿಷ್ಠರ ಹೆಸರು ದುರ್ಬಳಕೆ: ರವಿ ಗಣಿಗ ವಿರುದ್ಧ ದೂರು ದಾಖಲು

0
20

ಹುಬ್ಬಳ್ಳಿ: ಬಿಜೆಪಿಯ ಮುಖಂಡ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ನಾಲ್ಕಾರು ಮುಖಂಡರು ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಸಂಚನ್ನು ನಡೆಸಿ ಪ್ರತಿಯೊಬ್ಬ ಶಾಸಕರಿಗೆ 50 ರಿಂದ 100 ಕೋಟಿ ರೂಪಾಯಿಗಳನ್ನು ಆಮಿಷ ಒಡ್ಡುತ್ತಿದ್ದಾರೆ, ಎಂಬ ಸುಳ್ಳು ಹೇಳಿಕೆಯನ್ನು ಶಾಸಕ ರವಿ ಗಣಿಗ ನೀಡಿದ್ದು, ದೂರು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ‌, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಒತ್ತಾಯಿಸಿದ್ದಾರೆ.
ಈ ಕುರಿತು ಹುಬ್ಬಳ್ಳಿಯ ಉಪನಗರ ಠಾಣೆಯಲ್ಲಿ ದೂರು ನೀಡಿ ಒತ್ತಾಯಿಸಿರುವ ಅವರು, ಶಾಸಕರು ಸಾಕ್ಷಿರಹಿತ ಮತ್ತು ರಾಜಕೀಯ ದುರುದ್ದೇಶಪೂರ್ವಕವಾಗಿ ಮತ್ತು ತೇಜೋವಧೆ ಮಾಡುವ ದುರುದ್ದೇಶದಿಂದ ಹೇಳಿಕೆ ನೀಡಿದ್ದಾರೆ.
ಭಾರತೀಯ ಜನತಾ ಪಕ್ಷದ ಬದ್ಧತೆಗೆ ಧಕ್ಕೆ ತರುವ ದುರುದ್ದೇಶವನ್ನು ಹೊಂದಿದ್ದು, ಭಾರತೀಯ ನ್ಯಾಯ ಸಂಹಿತೆ ಕಾನೂನಿನಡಿಯಲ್ಲಿ ದಂಡಿಸಲ್ಪಡುವ ಅಪರಾಧಗಳನ್ನು ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ದಂಡಿಸಲ್ಪಡುವ ಅಪರಾಧವನ್ನು ಎಸಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆದುದರಿಂದ ಅವರ ಮೇಲೆ ದೂರು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಪಿ.ರಾಜೀವ್ ಅವರಿಂದ ದೂರು ಸ್ವೀಕರಿಸಿದ್ದು, ವಿಚಾರಣೆಯ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಎಫ್‌ಐಆರ್ ಮಾಡಿಕೊಂಡಿಲ್ಲ ಎಂದು ಉತ್ತರ ಎಸಿಪಿ‌ ಶಿವಪ್ರಕಾಶ ನಾಯಕ್ ತಿಳಿಸಿದರು‌.

Previous articleಅತ್ಯಾಚಾರ ಪ್ರಕರಣ: ಇತರ ಆರೋಪಿಗಳಿಗಾಗಿ ತೀವ್ರ ಶೋಧ
Next articleಮಳೆಮಲ್ಲೇಶ್ವರ ಅದ್ಧೂರಿ ರಥೋತ್ಸವ