ಹುಬ್ಬಳ್ಳಿ: ಬಿಜೆಪಿ ಮುಖಂಡರು ಜನಾಕ್ರೋಶ ಯಾತ್ರೆ ಬದಲು ಪಶ್ಚಾತ್ತಾಪ ಯಾತ್ರೆ ಮಾಡಬೇಕು. ಕಾರಣ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಅಷ್ಟೊಂದು ಅನ್ಯಾಯ ಮಾಡಿದೆ. ಕರ್ನಾಟಕದ ಜನರ ಹಿತ ಕಡೆಗಣಿಸಿದೆ. ಹೀಗಾಗಿ ಬಿಜೆಪಿಯವರು ಪಶ್ಚಾತಾಪ ಯಾತ್ರೆ ಮಾಡಲಿ ಎಂದು ಕರ್ನಾಟಕ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
ರವಿವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದೆ. ಆದರೆ ಕೇಂದ್ರ ಸರಕಾರ ಕೂಡ ಇಂಧನ, ಪೆಟ್ರೋಲ್ ಬೆಲೆ, ಅಡುಗೆ ಅನಿಲ ಬೆಲೆ ಏರಿಕೆ ಮಾಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದಲ್ಲಿ ಸಾಕಷ್ಟು ಬೆಲೆ ಏರಿಕೆಯಾಗಿದೆ. ಹೀಗಾಗಿ ಜನಾಕ್ರೋಶ ಯಾತ್ರೆ ಮಾಡುವುದು ಅರ್ಥಹೀನವಾದುದು. ಈ ರೀತಿ ಯಾತ್ರೆ ಮಾಡುವ ನೈತಿಕತೆ ಬಿಜೆಪಿಗೆ ಇಲ್ಲ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ನಿರ್ಮಲಾ ಸೀತಾರಾಮನ್ ಅವರು ಪ್ರಮುಖ ಖಾತೆಗಳನ್ನು ಹೊಂದಿದ್ದಾರೆ. ಪ್ರಧಾನಿಯವರ ಅತ್ಯಾಪ್ತ ಬಳಗದಲ್ಲಿದ್ದಾರೆ. ಅಷ್ಟೇ ಅಲ್ಲದೇ ರಾಜ್ಯದಿಂದ ೧೮ ಲೋಕಸಭಾ ಸದಸ್ಯರು ಬಿಜೆಪಿಯವರೇ ಇದ್ದಾರೆ. ಇಷ್ಟೆಲ್ಲ ಇದ್ದರೂ ನಮ್ಮ ರಾಜ್ಯಕ್ಕೆ ಯಾಕೆ ಅನ್ಯಾಯ ಮಾಡಲಾಗುತ್ತಿದೆ ಎಂಬುದನ್ನು ಪ್ರಶ್ನೆ ಮಾಡಬೇಕು ಎಂದು ಆಗ್ರಹಿಸಿದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಇದ್ದಾಗ ಐವತ್ತ ರೂ. ಆಸುಪಾಸು ಇದ್ದಂತಹ ಪೆಟ್ರೋಲ್, ಡಿಸೇಲ್ ಬೆಲೆ ಇದೀಗ ನೂರರ ಗಡಿ ದಾಟಿದೆ. ಇಂಧನ ಬೆಲೆ ೧ ಸಾವಿರ ರೂ ಗಡಿದಾಟಿದೆ. ಇದಕ್ಕೆ ನಾವು ಕಾರಣವೇ? ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಕೇಂದ್ರ ಸರಕಾರ ಕೂಡ ಬೆಲೆ ಏರಿಕೆ ಮಾಡಿರುವುದರಿಂದ ತಮ್ಮ ಸರಕಾರದ ವಿರುದ್ಧ ಮೊದಲು ಹೋರಾಟ ಮಾಡಲಿ ಎಂದು ಸಲೀಂ ಅಹ್ಮದ್ ಒತ್ತಾಯ ಮಾಡಿದರು.