ದಾವಣಗೆರೆ: ರಾಜ್ಯ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಸೋಮವಾರ ಕೈಗೊಂಡಿದ್ದ ಬಿಜೆಪಿ ಜನಾಕ್ರೋಶ ಯಾತ್ರೆಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಾರುಕೋಲು ಬೀಸುವ ಮೂಲಕ ಬಾರುಕೋಲು ಚಳವಳಿಗೆ ಚಾಲನೆ ನೀಡಿದರು.
ನಗರದ ಜಯದೇವ ವೃತ್ತದಲ್ಲಿ ಬಹಿರಂಗ ಸಮಾವೇಶ ಮುಗಿದ ಬಳಿಕ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ನಾಯಕರು ಬಾರುಕೋಲು ಬೀಸುವ ಮೂಲಕ ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಸರ್ಕಾರಕ್ಕೆ ಚಾಟಿ ಬೀಸಿದರು.
ನಂತರ ಜಯದೇವ ವೃತ್ತ, ಅಶೋಕ ರಸ್ತೆಯ ಮೂಲಕ ಮಹಾತ್ಮ ಗಾಂಧಿ ವೃತ್ತದಿಂದ ಪಿ.ಬಿ.ರಸ್ತೆಯಲ್ಲಿ ಸಾಗಿದ ಮೆರವಣಿಗೆ ಉಪವಿಭಾಗಾಧಿಕಾರಿಗಳ ಕಚೇರಿಯವರೆಗೆ ತೆರಳಿ ಅಂತ್ಯಗೊಂಡಿತು.
ಹೂವಿನ ಸುರಿಮಳೆ: ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಬಿಜೆಪಿ ಕಾರ್ಯಕರ್ತರು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ರಾಜ್ಯ ನಾಯಕರ ಮೇಲೆ ಹೂವಿನ ಸುರಿಮಳೆಗೈದರು. ರಸ್ತೆಯ ಬದಿಗಳಲ್ಲಿ ನಿಂತು ಬಿಜೆಪಿ ನಾಯಕರಿಗೆ ಸ್ವಾಗತ ಕೋರುತ್ತಿದ್ದ ಜನರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೈಬಿಸಿ ನಗೆ ಬೀರಿದರು.