ಬೆಳಗಾವಿ: ಬಿಜೆಪಿಯವರು ಇದೇ ರೀತಿ ತಮ್ಮ ಮೊಂಡಾಟ ಮುಂದುವರೆಸಿದರೆ ಅವರ ಎಲ್ಲ ಕಾರ್ಯಕ್ರಮವನ್ನು ನಮ್ಮ ಕಾರ್ಯಕರ್ತರು ತಡೆಯುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಶಾಂತಿಯುತವಾಗಿ ಪ್ರತಿಭಟನಾ ಸಮಾವೇಶ ನಡೆಸುತ್ತಿದ್ದಾಗ, ಬಿಜೆಪಿಯ ಕೆಲ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸುವ ಹತಾಶ ಪ್ರಯತ್ನ ನಡೆಸಿದರು. ಆದರೆ, ಎಚ್ಚರಿಕೆ ನೀಡುತ್ತೇನೆ ಇಂತಹ ತಂತ್ರ ಮುಂದುವರೆದರೆ, ರಾಜ್ಯದಲ್ಲಿ ಬಿಜೆಪಿ ಒಂದೇ ಒಂದು ಕಾರ್ಯಕ್ರಮ ನಡೆಸಲಾಗುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹರಿಹಾಯ್ದರು.
ನಿಮ್ಮ(ಬಿಜೆಪಿ) ಕಾರ್ಯಕರ್ತರಿಗೆ ಬುದ್ಧಿ ಹೇಳಿ, ಇಲ್ಲದಿದ್ದರೆ ಭಾರಿ ಪರಿಣಾಮ ಎದುರಿಸಬೇಕಾಗುತ್ತದೆ. ಈ ನಾಟಕ ರೂಪದ ಪ್ರವೃತ್ತಿ ಮುಂದುವರೆದರೆ, ರಾಜ್ಯದ ಮೂಲೆಗೂ ನಿಮ್ಮ ಕಾರ್ಯಕ್ರಮ ನಡೆಯಲು ಬಿಡುವುದಿಲ್ಲ ಎಂದು ಡಿಕೆಶಿ ಎಚ್ಚರಿಸಿದರು.
ರಾಜ್ಯದ ಜನರು ನನಗೆ ಶಕ್ತಿ ನೀಡಿದ್ದಾರೆ. ಬಲ ನೀಡಿದ್ದಾರೆ. ಬುದ್ಧಿವಂತಿಕೆ ಪ್ರದರ್ಶಿಸಿ, ಇಲ್ಲದಿದ್ದರೆ ನಮ್ಮ ಹೋರಾಟ ಎಲ್ಲಿಯೂ ತಡೆಯಲಾಗದು. ಇಂದು ನಮ್ಮ ಕಾರ್ಯಕರ್ತರಿಗೆ ನಾನು ಸ್ಪಷ್ಟ ಸಂದೇಶ ರವಾನೆ ಮಾಡಬೇಕಾಗಿದೆ. ಬೆಲೆ ಏರಿಕೆ ಹೊಣೆ ಬಿಜೆಪಿಯೇ ಹೊರಬೇಕು. ಅದಕ್ಕೆ ಮೊದಲು ಅವರು ಉತ್ತರಿಸಬೇಕು. ಯಾಕೆ ಚಿನ್ನ, ಪೆಟ್ರೋಲ್, ಡೀಸೆಲ್ ಬೆಲೆಗಳು ಹಾರಿ ಬಿದ್ದಿವೆ ಎಂದು ಡಿಕೆಶಿ ಪ್ರಶ್ನೆ ಮಾಡಿದರು.
ಕೇವಲ ಪ್ರಶ್ನೆ ಅಲ್ಲ, ಯೋಜನೆಯೂ ಇದೆ. ನಾವು ಸಹಾಯ ಮಾಡುವ ಉದ್ದೇಶದಿಂದ ೫೨ ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ. ಇದರ ಲಾಭ ರಾಜ್ಯದ ಜನರಿಗೆ ತಲುಪಲಿದೆ ಎಂದು ಡಿಕೆಶಿ ವಿವರಿಸಿದರು.