ಬಿಜೆಪಿಯಿಂದ ಹುಬ್ಬಳ್ಳಿಯಲ್ಲಿ ಬೃಹತ್ ತಿರಂಗಾ ಯಾತ್ರೆ

ಸಾವಿರಾರು ದೇಶಾಭಿಮಾನಿಗಳು, ವಿದ್ಯಾರ್ಥಿಗಳು ಭಾಗಿ

ಹುಬ್ಬಳ್ಳಿ: ಆಪರೇಷನ್ ಸಿಂಧೂರ ಬೆಂಬಲಿಸಿ ಬಿಜೆಪಿಯು ನಗರದಲ್ಲಿ ಶುಕ್ರವಾರ ಮೂರುಸಾವಿರಮಠದಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದವರೆಗೆ ನಡೆಸಿದ ಬೃಹತ್ ತಿರಂಗಾ ಯಾತ್ರೆಯಲ್ಲಿ ಬಿಜೆಪಿ ಮುಖಂಡರು, ಪಕ್ಷದ ಶಾಸಕರು, ದೇಶಾಭಿಮಾನಿಗಳು, ಶಾಲಾ, ಕಾಲೇಜು ವಿದ್ಯಾರ್ಥಿ – ವಿದ್ಯಾರ್ಥಿನಿಯರು ಪಾಲ್ಗೊಂಡು ದೇಶಾಭಿಮಾನ ಮೆರೆದರು.

ಭಾರತಮಾತೆ, ಸೈನಿಕರ ಪರ ಜಯಘೋಷ ಮೊಳಗಿಸಿದರು. ತಿರಂಗಯಾತ್ರೆ ಉದ್ದಕ್ಕೂ ಮಾರ್ಗದ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು ತಿರಂಗಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಮರ್ಪಿಸಿದರು.

ನಗರದ ಮೂರುಸಾವಿರಮಠದ ಮೈದಾನದಲ್ಲಿ ಬೆಳಿಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ತಿರಂಗ ಯಾತ್ರೆಗೆ ಚಾಲನೆ ನೀಡಿದರು.

ತಿರಂಗ ಯಾತ್ರೆಗೂ ಮುನ್ನ ಮಾಜಿ ಯೋಧರಿಗೆ ಸನ್ಮಾನ ಮಾಡಲಾಯಿತು. ಆಪರೇಷನ್ ಸಿಂದೂರ್‌ನಲ್ಲಿ ಭಾರತೀಯ ಸೇನೆಯ ಪರಾಕ್ರಮ, ಸೈನಿಕರ ಸಾಹಸ , ಉಗ್ರರ ನೆಲೆಗಳನ್ನು ನಾಶಪಡಿಸಿದ ಧಿರೋದ್ದಾತ ಕಾರ್ಯಾಚರಣೆಯನ್ನು ಶ್ಲಾಘಿಸಲಾಯಿತು.

ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ತಿರಂಗ ಯಾತ್ರೆ ಸಾಗಿತು. ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ್ ಟೆಂಗಿನಕಾಯಿ , ಕುಂದಗೋಳ ಶಾಸಕ ಎಂ.ಆರ್ ಪಾಟೀಲ,ಬಿಜೆಪಿ ಹು- ಧಾ ಮಹಾನಗರ ಮತ್ತು ಧಾರವಾಡ ಜಿಲ್ಲಾ ಗ್ರಾಮೀಣ ಘಟಕ ಅಧ್ಯಕ್ಷರು, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.