ಹುಬ್ಬಳ್ಳಿ: ಇಲ್ಲಿನ ವಿಜಯನಗರದಲ್ಲಿ ಬಾಲಕಿ ಹತ್ಯೆ ಮಾಡಿದ ಆರೋಪಿ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾಗಿದ್ದಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಸಿಐಡಿಗೆ ವಹಿಸಲಾಗಿದ್ದು, ಮಂಗಳವಾರ ತನಿಖಾ ತಂಡ ನಗರಕ್ಕೆ ಆಗಮಿಸಿ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆಯಿತು.
ಸಿಐಡಿ ಎಸ್.ಪಿ. ವೆಂಕಟೇಶ ನೇತೃತ್ವದಲ್ಲಿ ಡಿವೈಎಸ್‌ಪಿ ಪುನೀತ್‌ಕುಮಾರ್, ಇನ್‌ಸ್ಪೆಕ್ಟರ್ ಮಂಜುನಾಥ ಅವರ ತಂಡ ಪೊಲೀಸರಿಂದ ಪ್ರಕರಣಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ಹಾಗೂ ದಾಖಲೆಗಳನ್ನು ಹಸ್ತಾಂತರಿಸಿಕೊಂಡರು.
ಮಗು ಕೊಲೆಯಾದ ಹಾಗೂ ಆರೋಪಿ ಗುಂಡೇಟಿನಿಂದ ಮೃತಪಟ್ಟ ಸ್ಥಳ ಮತ್ತು ಕೆಎಂಸಿಆರ್‌ಐ ಆಸ್ಪತ್ರೆಯ ಶವಾಗಾರಕ್ಕೆ ತೆರಳಿ ಸಿಐಡಿ ತಂಡ ಪರಿಶೀಲನೆ ನಡೆಸಿದರು. ಸ್ಥಳ ಮಹಜರಿನ ದಾಖಲೆಗಳನ್ನು ಪರಿಶೀಲಿಸಿ, ಇನ್ನೂ ಹೆಚ್ಚಿನ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಪಡೆದರು.
ಯಾವುದೇ ಪ್ರಕರಣದಲ್ಲಿ ಆರೋಪಿ ಪೊಲೀಸರ ವಶದಲ್ಲಿದ್ದಾಗ ತನಿಖಾ ಹಂತ ಅಥವಾ ಮಾಹಿತಿ ಸಂಗ್ರಹಿಸುವಾಗ ಮೃತಪಟ್ಟರೆ, ಕೋರ್ಟ್ ಆದೇಶದ ಪ್ರಕಾರ ಆ ಪ್ರಕರಣದ ತನಿಖೆಯನ್ನು ಸಿಐಡಿ ವಹಿಸಬೇಕು. ಹೀಗಾಗಿ ಬೆಂಗಳೂರಿನಿಂದ ಸಿಐಡಿ ಅಧಿಕಾರಿಗಳು ಬಂದಿದ್ದಾರೆ. ಅವರೇ ಇನ್ನು ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ ಎಂದು ಡಿಸಿಪಿ ಮಹಾನಿಂಗ ನಂದಗಾವಿ ತಿಳಿಸಿದರು.