ದಾವಣಗೆರೆ: ಶಾಲೆಯ ಮೇಲ್ಭಾಗದ ಶಿಥಿಲ ಬಾಯ್ಲರ್‌ಗೆ ಉರಿ ಹಾಕುತ್ತಿದ್ದ ವೇಳೆ ಬಾಯ್ಲರ್ ಬಿದ್ದು ಬಾಲಕನೊಬ್ಬ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಟೆಲ್ ವಾರ್ಡನ್ ಹಾಗೂ ಶಾಲೆಯ ಮುಖ್ಯ ಶಿಕ್ಷಕರನ್ನು ಇಲ್ಲಿನ ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ.
ಹರಿಹರ ತಾ. ಜಿಗಳಿ ಗ್ರಾಮದ ಕೆ.ಆರ್.ರಾಮಪ್ಪ ಎಂಬುವರ ೧೧ ವರ್ಷದ ಪುತ್ರ ಸಾವಿನ ಹಿನ್ನೆಲೆಯಲ್ಲಿ ದಾವಣಗೆರೆಯ ಶ್ರೀ ಶಿವಕುಮಾರಸ್ವಾಮಿ ಬಡಾವಣೆಯ ಶ್ರೀ ಮಂಜುನಾಥ ಸ್ವಾಮಿ ಪರಿಶಿಷ್ಟ ವರ್ಗಗಳ ವಸತಿಯುತ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹಾಗೂ ವಾರ್ಡನ್‌ನ್ನು ಪೊಲೀಸರು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಐದನೇ ತರಗತಿ ವಿದ್ಯಾರ್ಥಿ ಹಾಗೂ ಆತನ ಸ್ನೇಹಿತರಿಗೆ ಶಾಲೆಯ ಮೇಲ್ಭಾಗದ ಬಾಯ್ಲರ್‌ಗೆ ಉರಿ ಹಾಕಿ, ಬರುವಂತೆ ವಾರ್ಡನ್ ಫೆ.೩ರಂದು ಬೆಳಿಗ್ಗೆ ೯ ಗಂಟೆ ವೇಳೆ ಕಳಿಸಿದ್ದರು. ಮಕ್ಕಳು ಬಾಯ್ಲರ್‌ಗೆ ಉರಿ ಹಾಕುತ್ತಿರುವ ಶಿಥಿಲವಾಗಿದ್ದ ಬಾಯ್ಲರ್ ವಿದ್ಯಾರ್ಥಿ ಮೇಲೆ ಬಿದ್ದು, ದೇಹದ ಒಳ ಭಾಗದಲ್ಲಿ ಪೆಟ್ಟಾಗಿತ್ತು. ಆದರೆ, ಗಾಯಾಳು ಬಾಲಕನಿಗೆ ಯಾವುದೇ ಚಿಕಿತ್ಸೆ ಕೊಡಿಸದೇ, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ವಾರ್ಡನ್, ಶಾಲೆಯ ಆಡಳಿತ ಮಂಡಳಿಯವರು ನಿರ್ಲಕ್ಷ್ಯ ತೋರಿದ್ದರಿಂದ ತಮ್ಮ ಮಗ ಸಾವನ್ನಪ್ಪಿದ್ದಾನೆ ಎಂದು ಜಿಗಳಿ ಕೆ.ಆರ್.ರಾಮಪ್ಪ ದೂರಿದ್ದರು.
ಪ್ರಕರಣದ ಸೂಕ್ತ ತನಿಖೆ ನಡೆಸಿದ ಪೊಲೀಸರು ತಪ್ಪಿತಸ್ಥರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.