ಬಾಯ್ದೆರೆದಿರುವ  ಕ್ರಷರ್‌ಗಳ ಆರ್ಭಟ ಕಂಡು ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತ ಬಿ.ವೀರಪ್ಪ ಕಿಡಿ


ದಾವಣಗೆರೆ: ಗುರುವಾರ ಬೆಳ್ಳಂಬೆಳಗ್ಗೆ ತಾಲೂಕಿನ ಹಿರೇತೊಗಲೇರಿ ಕ್ರಷರ್ ಗೆ ಭೇಟಿ ನೀಡಿದ ಉಪಲೋಕಾಯುಕ್ತ ಬಿ.ವೀರಪ್ಪ ಪರಿಶೀಲನೆ ನಡೆಸಿದರು. ಈ ವೇಳೆ ಕಲ್ಲುಕ್ವಾರಿಗಳ ಸುತ್ತ ತಂತಿ ಬೇಲಿ ಹಾಕದಿರುವುದನ್ನು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹಿರೇತೊಗಲೇರಿ ಸರ್ವೆ ನಂಬರ್ ೫೬, ಪಟ್ಟಾ ಭೂಮಿ ಸಿದ್ದೇಶ್ವರ ಕ್ರಷರ್ ಪರಿಶೀಲನೆ ನಡೆಸಿದ ಉಪಲೊಕಾಯುಕ್ತ ನ್ಯಾ.ಬಿ.ವೀರಪ್ಪ ಈ ವೇಳೆ ಜಿಲ್ಲೆಯಲ್ಲಿನ ಕಲ್ಲು ಗಣಿಗಾರಿಕೆ ಹಾಗೂ ಅಕ್ರಮ ಕ್ರಷರ್‌ಗಳ ಆರ್ಭಟಕ್ಕೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಕಲ್ಲು ಗಣಿಗಾರಿಕೆಯ ಕ್ವಾರಿಗಳನ್ನು ನೋಡಿದರೆ, ಸರ್ಕಾರದ ಯಾವುದೇ ನಿಯಮಗಳನ್ನು ಪಾಲನೆ ಮಾಡಿರುವುದು ಕಂಡು ಬರುತ್ತಿದೆ. ಇಲ್ಲಿ ಬಾಯಿ ತೆರೆದಿರುವ ಕಲ್ಲುಕ್ವಾರಿಗಳು ಎಷ್ಟು ಜನಜಾನುವಾರುಗಳ ಪ್ರಾಣ ತೆಗೆದಿವೆ ಎಂಬ ಮಾಹಿತಿ ಇದೆಯಾ?, ಇದು ನಿಮಗೆ ಸರಿ ಕಾಣಿಸುತ್ತಿದೆಯಾ, ನೀವು ಕಚೇರಿಯೊಳಗೆ ಕುಳಿತು ಬಿಟ್ಟರೆ, ಇಲ್ಲಿ ನಡೆಯುವ ಕೆಲಸಗಳು, ಅನಾಹುತಗಳು ಹೇಗೆ ಗೊತ್ತಾಗುತ್ತವೆ. ಸರ್ಕಾರದ ಎಲ್ಲಾ ರೀತಿಯ ನಿಯಮ ಉಲ್ಲಂಘಿಸಿರುವ ಕಲ್ಲುಕ್ವಾರಿಗಳ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಂಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ನಿನ್ನೆಯಷ್ಟೆ ಗಣಿ ಇಲಾಖೆ ಕಚೇರಿ ಭೇಟಿ ನೀಡಿದ ನ್ಯಾ.ಬಿ.ವೀರಪ್ಪ ಜಿಲ್ಲೆಯಲ್ಲಿ ಪರವಾನಗಿ ಪಡೆದ ಕಲ್ಲುಕ್ವಾರಿ ಹಾಗೂ ಕ್ರಷರ್‌ಗಳ ಮಾಹಿತಿಯನ್ನು ಎಷ್ಟು ಎಂದು ಪ್ರಶ್ನಿಸಿದ್ದರು. ಜಿಲ್ಲೆಯಲ್ಲಿ ೧೨೮ ಕ್ಕೂ ಹೆಚ್ಚು ಕ್ರಷರ್‌ಗಳಿಗೆ ಪರವಾನಿಗೆ ನೀಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದರು. ಪರವಾನಗಿ ಪಡೆದ ಕಲ್ಲುಕ್ವಾರಿ ಹಾಗೂ ಕ್ರಷರ್‌ಗಳು ಸರಿಯಾಗಿ ರಾಜಧನ ಪಾವತಿಸಿವಿಯೇ.? ಎಷ್ಟು ರಾಜಧನ ಸರ್ಕಾರಕ್ಕೆ ಸಂದಾಯವಾಗಿದೆ, ಎಷ್ಟು ನಿಂತಿವೆ ಎನ್ನುವ ಮಾಹಿತಿಯನ್ನು ಲೋಕಾಯುಕ್ತಕ್ಕೆ ನೀಡುವಂತೆ ಅವರು ನಿರ್ದೇಶಿಸಿದ್ದರು. ಕಲ್ಲುಕ್ವಾರಿಗಳ ಸುತ್ತ ತಂತಿ ಬೇಲಿ ಅಳವಡಿಸಬೇಕು. ಕ್ರಷರ್‌ಗಳು ಹೆಚ್ಚು ವಾಯುಮಾಲಿನ್ಯವಾಗದಂತೆ ಕಲ್ಲುಗಳನ್ನು ಪುಡಿ ಮಾಡಬೇಕು. ಈ ಸಂಬಂಧವಾಗಿ ಎಲ್ಲಾ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು ಎಂದು ನ್ಯಾ.ಬಿ.ವೀರಪ್ಪ ಸೂಚನೆ ನೀಡಿದ್ದರು.
ಉಪಲೋಕಾಯುಕ್ತರ ಭೇಟಿ ವೇಳೆ ದಾವರಣಗೆರೆ ತಾಲ್ಲೂಕಿನ ಗಣಿ ಇಲಾಖೆ ಅಧಿಕಾರಿ ರಜೆ ಮೇಲೆ ತೆರಳಿದ್ದರು. ಇತರೆ ಅಧಿಕಾರಿಗಳು ಸರಿಯಾದ ಮಾಹಿತಿಯನ್ನು ನ್ಯಾಯಮೂರ್ತಿಗಳಿಗೆ ನೀಡಿರಲಿಲ್ಲ. ಹೀಗಾಗಿ ಉಪಲೋಕಾಯುಕ್ತ ಬಿ.ವೀರಪ್ಪ ಗುರುವಾರ ಬೆಳ್ಳಂಬೆಳಗ್ಗೆ ತಾಲೂಕಿನ ಹಿರೇತೊಗಲೇರಿ ಕಲ್ಲುಕ್ವಾರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.