ಇಂದು ಆಳಂದನಲ್ಲಿ, ನಾಳೆ ನಿಮ್ಮಲ್ಲಿ ಇದೇ ಆಟ ನಡೆಯುತ್ತೆ
ಕಲಬುರಗಿ : ಜಿಲ್ಲೆಯ ಆಳಂದ ಬಳಿಯ ಲಾಡ್ಲೆ ಮಶಾಕ್ ದರ್ಗಾದಲ್ಲಿನ ರಾಘವಚೈತನ್ಯ ಶಿವಲಿಂಗದ ಪೂಜೆ ವಿವಾದ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ಈ ವಿಚಾರವಾಗಿ ಮೌನವಾಗಿರುವ ಮಠಾಧೀಶರ ವಿರುದ್ದ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ನ್ಯಾಯಾಲಯದ ನಿರ್ದೇಶನದಂತೆ ಪೂಜೆ ಮುಗಿಸಿ ಮುಂದಿನ ಹೋರಾಟ ಮಾಡುತ್ತೇವೆ. ಬರುವ ಯುಗಾದಿಗೆ ಆಂದೋಲಾ ಸ್ವಾಮೀಜಿ ನೇತೃತ್ವದಲ್ಲಿ ಮತ್ತೆ ಪೂಜೆ ಮಾಡುತ್ತೇವೆ. ಸದ್ಯ ಈ
ವಿಚಾರ ಜೀವಂತವಾಗಿ ಇಟ್ಟಿದ್ದೇವೆ. ಇದನ್ನೂ ನಾವು ಕೈ ಬಿಟ್ಟರೆ ಅದು ವಕ್ಫ್ ಬೋರ್ಡ್ದೇ ಆಗಿ ಬಿಡುತ್ತೆ. ಶ್ರೀರಾಮ ಸೇನೆ, ಆರ್ ಎಸ್ ಎಸ್, ವಿಶ್ವ ಹಿಂದೂ ಪರಿಷತ್ ಸೇರಿ ಕೆಲವರು ಬಿಟ್ಟರೆ ಉಳಿದವರು ಯಾಕೆ ಬಾಯಿ ಮುಚ್ಚಿ ಕುಳಿತಿದ್ದಾರೋ? ಉಳಿದ ಸ್ವಾಮೀಜಿಗಳೇ ನೀವೇನು ನಿದ್ದೆ ಮಾಡುತ್ತಿದ್ದೀರಾ? ನಿಮ್ಮ ಮಠದ ಒಳಗಡೆ ಇರುವ ಲಿಂಗಕ್ಕೂ ನಾಳೆ ಮಲಮೂತ್ರ ಎರಚುತ್ತಾರೆ. ಸ್ವಾಮಿಜಿಗಳೇ, ನೀವು ಕಣ್ಣು ತೆರೆಯಿರಿ, ಆಂದೋಲಾ ಸ್ವಾಮೀಜಿಗಳನ್ನು ಬ್ಯಾನ್ ಮಾಡಿದ್ದಾರೆ. ಆದರೂ ಒಬ್ಬ ಸ್ವಾಮಿಯೂ ತುಟಿ ಪಿಟಕ್ ಎನ್ನುತ್ತಿಲ್ಲ. ನರಸತ್ತವರ ರೀತಿ ವರ್ತನೆ ಮಾಡಬೇಡಿ ಮಠಾಧಿಪತಿಗಳೇ. ಇವತ್ತು ಆಳಂದನಲ್ಲಿ, ನಾಳೆ ನಿಮ್ಮಲ್ಲಿ ಇದೇ ಆಟ ನಡೆಯುತ್ತೆ. ನೀವು ಬಾಯಿ ಮುಚ್ಚಿಕೊಂಡು ಕೂತರೆ ನಿಮ್ಮ ಮಠ ಹೋಗುವುದು ಗ್ಯಾರಂಟಿ ಎಂದು ಕಿಡಿಕಾರಿದ್ದಾರೆ.