ದಾವಣಗೆರೆ(ನ್ಯಾಮತಿ): ತಾಲೂಕಿನ ಮಾದಾಪುರ ಗ್ರಾಮದ ಕೆರೆ ಹೂಳೆತ್ತುವ ಸಂದರ್ಭದಲ್ಲಿ 7ನೇ ಶತಮಾನದ ಶಿಲಾಶಾಸನವೊಂದು ಪತ್ತೆಯಾಗಿದೆ. ಬಾದಾಮಿ ಚಾಲುಕ್ಯರ ಶಾಸನವೆಂದು ವಿಜಯನಗರ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಕಮಲಾಪುರ ನಿದೇಶಕ ಡಾ.ಆರ್. ಶೇಜೇಶ್ವರ ತಿಳಿಸಿದ್ದಾರೆ.
ಶಾಸನವು ೫ ಅಡಿ ಉದ್ದವಿದ್ದು ಹಳೆಗನ್ನಡದ ೧೭ ಸಾಲುಗಳ ಬರಹ ಹೊಂದಿದೆ. ಕ್ರಿ.ಶ.೭ನೇ ಶತಮಾನದ ಬಾದಾಮಿ ಚಾಲುಕ್ಯರ ಒಂದನೇ ವಿಕ್ರಮಾದಿತ್ಯ ರಾಜರ ಆಳ್ವಿಕೆಯ ಸಮಯದ ಅಧಿಕಾರಿ ಸಿಂಘವೆಣ್ಣ ಬಳ್ಳಾವಿ ನಾಡನ್ನು ಆಳುತ್ತಿದ್ದಾಗ ಪ್ರಜೆಗಳಿಗಾಗಿ ಊರ ಮೇಲಿನ ತೆರಿಗೆಗಳನ್ನು ಮನ್ನಾ ಮಾಡಿರುವುದನ್ನು, ಕೆರೆಯನ್ನು ನಿರ್ಮಿಸಿದ ಜನರಿಗೆ ಭೂಮಿಯನ್ನು ದಾನ ನೀಡಿರುವುದನ್ನು ಹಾಗೂ ಭೂಮಿಯು ಬಳ್ಳಾವಿ ಎಪ್ಪತ್ತರ ಒಕ್ಕಲುಗಳಿಗೆ ಸಲ್ಲುತ್ತದೆ ಎಂದು ಶಾಸನದಲ್ಲಿ ಉಲ್ಲೇಖವಿದೆ.
ಶಾಸನ ಶೋಧನೆಯಿಂದಗಿ ಬಳ್ಳಾವಿ ೭೦ ಎಂಬ ಗ್ರಾಮಗಳಿದ್ದು ಆಡಳಿತ ವಿಭಾಗದ ಪ್ರಾಚೀನತೆಯನ್ನು ಮತ್ತು ಈ ಶಾಸನವು ೧೩೪೪ ವರ್ಷಗಳ ಪುರಾತನವಾಗಿದ್ದು ಎಂದು ತಿಳಿದು ಬಂದಿದ್ದು ಶಾಸನದ ಮುಂಭಾಗ ಹಾಗೂ ಹಿಂಭಾಗದಲ್ಲಿ ಕ್ರಿ.ಶ.೭ನೇ ಶತಮಾನದಲ್ಲಿ ಅಪೂರ್ಣ ಉಬ್ಬು ಶಿಲ್ಪವಿದೆ ಎಂದು ತಿಳಿಸಿದ್ದಾರೆ.
ಶಾಸನದ ಪರಿಶೀಲನೆಯಲ್ಲಿ ಕಾರ್ಯದಲ್ಲಿ ಸಹಕರಿಸಿದ ಪ್ರೊ.ಶ್ರೀನಿವಾಸ ಪಾಡಿಗರ, ಡಾ.ರವಿಕುಮಾರ ನವಲಗುಂದ, ಮಂಜಪ್ಪ ಚುರ್ಚಗುಂಡಿ, ಮಾದಾಪುರ ಗ್ರಾಮ ಲೆಕ್ಕಿಗ ವಿಶ್ವನಾಥ, ಗ್ರಾಮಸ್ಥರಾದ ಬುಜಂಗ, ವೀರೇಶ್, ರಮೇಶ ಹಿರೆಜಂಬೂರು ಅವರಿಗೆ ನಿದೇಶಕರಾದ ಡಾ.ಆರ್.ಶೇಜೇಶ್ವರ ಅಭಿನಂದಿಸಿದ್ದಾರೆ.